ನಂಜನಗೂಡು: ಹಂದಿ ಸಾಕಾಣಿಕೆಯ ನೆಪವೊಡ್ಡಿ ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಕವಲಂದೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಂಜನಗೂಡು ತಾಲ್ಲೂಕಿನ ಚಿನ್ನದಗುಡಿಹುಂಡಿ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಾಲಯ ಮತ್ತು ಬಸವೇಶ್ವರ ದೇವಾಲಯದ ಬಳಿ ಗೋವುಗಳನ್ನು ಕಡಿದು ಗೋಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಹಂದಿಗಳನ್ನು ಕೂಡಿ ಹಾಕುವ ಶೆಡ್ ನಲ್ಲಿ ಗೋವನ್ನು ಕಡಿದು ಮಾಂಸವನ್ನು ಶೇಖರಣೆ ಮಾಡಿ ಇಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರಿಗೆ ಗೋಮಾಂಸ ಸಮೇತ ಸಿಕ್ಕಿದೆ.
ಚಿನ್ನದಗುಡಿಹುಂಡಿ ಗ್ರಾಮದ ಕೆರೆಯ ಪಕ್ಕದಲ್ಲೇ ಶೆಡ್ ಗಳನ್ನು ನಿರ್ಮಾಣ ಮಾಡಿಕೊಂಡು ಯಾವುದೇ ಅನುಮತಿ ಪಡೆಯದೆ ಹಂದಿ ಸಾಕಾಣಿಕೆ ಮಾಡಲಾಗುತ್ತಿದೆ. ಹಂದಿ ಸಾಕಾಣಿಕೆಯ ಹೆಸರಿನಲ್ಲಿ ಗೋಮಾಂಸವನ್ನು ಮಾರಾಟ ಮಾಡಲಾಗುತ್ತಿತ್ತು. ಗೋಮಾಂಸವನ್ನು ತೊಳೆದು ಬೇರೆ ಕಡೆ ಮಾರಾಟ ಮಾಡಲಾಗುತ್ತಿದೆ.
ಅಲ್ಲದೆ ಗೋಮಾಂಸವನ್ನು ಬಿಸಿಲಿಗೆ ಒಣಗಿಸಿ ಮಾಂಸವನ್ನು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ತುಂಡು ತುಂಡಾಗಿ ಕಟ್ಟು ಮಾಡಿದ ಗೋಮಾಂಸವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಕಾರ್ಯಾಚರಣೆಗೆ ಬಂದ ಪೊಲೀಸರಿಗೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು, ಎಸ್.ಬಿ ರಮೇಶ್, ಚಂದ್ರು ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

