ನಂಜನಗೂಡು: ಹಿಂದಿ ರಾಷ್ಟ್ರಭಾಷೆ. ಬ್ಯಾಂಕುಗಳಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುವುದು ಸಾಮಾನ್ಯವಾಗಿದೆ. ಆದರೆ  ತಾಲ್ಲೂಕಿನಲ್ಲಿ ಹೆಚ್ಚಾಗಿ ರೈತರು ವ್ಯವಹಾರ ಮಾಡುವುದರಿಂದ ಬ್ಯಾಂಕ್ ಸಿಬ್ಬಂದಿಗಳು ಕನ್ನಡ ಭಾಷೆಯನ್ನು ಕಲಿತುಕೊಂಡು ಸ್ಥಳೀಯರೊಂದಿಗೆ ವ್ಯವಹರಿಸಬೇಕಾಗಿದೆ. ಇನ್ಮುಂದೆ ತಾಲ್ಲೂಕಿನ ಎಲ್ಲಾ ಬ್ಯಾಂಕ್ ಗಳಲ್ಲಿಯೂ ಕನ್ನಡ ಭಾಷೆ ಕಡ್ಡಾಯ ಮಾಡಬೇಕು ಎಂದು ಆದೇಶ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಂಜನಗೂಡು ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಶನಿವಾರ ೭೦ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರಾಷ್ಟ್ರ ಧ್ವಜ ಮತ್ತು ಕನ್ನಡ ಬಾವುಟದ ಧ್ವಜಾರೋಹಣೆಯನ್ನು ನೆರವೇರಿಸಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಈಗಿನ ಮಕ್ಕಳಲ್ಲಿಯೂ ಕನ್ನಡ ಭಾಷೆ ತಾತ್ಸಾರ ಮನೋಭಾವನೆ ಇದೆ. ಕನ್ನಡವನ್ನು ಬಳಸದೆ ಇರುವುದು ಬೇಸರ ತರುತ್ತದೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ  ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಮಾತನಾಡಿದರೆ ದಂಡ ಹಾಕ್ತಾ ಇದ್ರು, ಅದು ಈಗಲೂ ಹಲವು ಶಾಲೆಯಲ್ಲಿ ಇದೀಯಾ‌ ಎಂದು ಪ್ರಶ್ನಿಸಿದರು.  ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಕನ್ನಡ ಭಾಷೆ ಮಾತನಾಡುತ್ತಿಲ್ಲ ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ.

ಕನ್ನಡ ನಾಡಿನಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಕನ್ನಡ ಭಾಷೆಯನ್ನು ಕಲಿತು ಮಾತನಾಡಬೇಕು. ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡಲೇಬೇಕು. ಇನ್ನು ಮುಂದೆ ನಮ್ಮ ನಂಜನಗೂಡು ತಾಲ್ಲೂಕಿನಲ್ಲಿರುವ ಎಲ್ಲಾ ಬ್ಯಾಂಕ್ ಗಳಲ್ಲಿಯೂ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಗ್ರಾಹಕರೊಂದಿಗೆ ಕಡ್ಡಾಯವಾಗಿ ಮಾತನಾಡಬೇಕು ಎಂದು ತಹಶೀಲ್ದಾರ್ ರವರು ಆದೇಶ ನೀಡುವಂತೆ ಶಾಸಕ ದರ್ಶನ್ ಧ್ರುವನಾರಾಯಣ್ ಸೂಚನೆ ನೀಡಿದರು.

ಇನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಂಗನವಾಡಿ ಸಿಬ್ಬಂದಿಗಳು ಪೌರಕಾರ್ಮಿಕರು  ಹಾಗೂ ಕನ್ನಡ ಐಚ್ಚಿಕ ಭಾಷೆಯಲ್ಲಿ ಶೇಕಡ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು  ಗುರುತಿಸಿ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ನಗರಸಭಾ ಅಧ್ಯಕ್ಷ ಶ್ರೀಕಂಠ, ಸಾಹಿತಿ ಡಾ.ಸಿ ನಾಗಣ್ಣ, ಡಿವೈಎಸ್ಪಿ ರಘು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪೌರಾಯುಕ್ತ ವಿಜಯ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷೆ ಲತಾ ಮುದ್ದು ಮೋಹನ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.