ಮೈಸೂರು: ಹೊಸ ವರ್ಷದ ವಿಶೇಷವಾಗಿ ಚಾಮುಂಡೇಶ್ವರಿ ಬೆಟ್ಟದ ಶ್ರೀ ಚಾಮುಂಡಿ ತಾಯಿಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಅವರಿಗೆ ಮೂಲ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚಾಮುಂಡಿಬೆಟ್ಟ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲ ಸೌಲಭ್ಯ ಒದಗಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬಂದೋಬಸ್ ವ್ಯವಸ್ಥೆ ಮಾಡಿ,

ವಾಹನ ಸಂಚಾರ ನಿಯಂತ್ರಣ ಮಾಡುವುದರ ಮೂಲಕ ಚಾಮುಂಡಿ ಬೆಟ್ಟ ರಸ್ತೆ ಮಾರ್ಗದ ಮೂಲಕ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಚಾಮುಂಡಿ ಬೆಟ್ಟಕ್ಕೆ ಹೊಸವರ್ಷದ ದಿನ ಮಾತ್ರ ಆಟೋಗಳ ಪ್ರವೇಶ ನಿರ್ಬಂಧಿಸಬೇಕು ಎಂದು ಸೂಚಿಸಿದರು.

ಆಟೋಗಳ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿ ಅಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ಬಸ್‌ಗಳನ್ನು ನಿಯೋಜಿಸಿ ಭಕ್ತಾದಿಗಳಿಂದ ಟಿಕೆಟ್ ಪಡೆದುಕೊಳ್ಳಬೇಕು. ಅಲ್ಲದೆ ನಗರದ ಇತರೆ ಪ್ರದೇಶಗಳಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಮತ್ತು ನಗರ ಬಸ್ ನಿಲ್ದಾಣದಿಂದ ಹಾಗೂ ರೈಲ್ವೆ ಸ್ಟೇಷನ್‌ನಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಹೊಸವರ್ಷದ ದಿನದಂದು ಸಾರ್ವಜನಿಕರಿಗೆ ಬೆಳಗ್ಗೆ 6.30ರಿಂದಲೇ ತಾವರೆಕೆರೆ ಗೇಟ್ ತೆರೆದಿರಲಾಗಿದ್ದು, ದರ್ಶನಕ್ಕೆ ಬರುವ ಭಕ್ತಾದಿಗಳು ಪಾರ್ಕಿಂಗ್ ಸ್ಥಳದಿಂದಲೇ ಸರದಿ ಸಾಲಿನಲ್ಲಿ ದೇವಸ್ಥಾನಕ್ಕೆ ಆಗಮಿಸಬೇಕು ಎಂದು ಮಾಹಿತಿ ನೀಡಿದರು.

ದಾಸೋಹ ಭವನದಲ್ಲಿ ಭಕ್ತಾದಿಗಳಿಗೆ ಉಚಿತ ಅನ್ನದಾಸೋಹ ವ್ಯವಸ್ಥೆ ಕಲ್ಪಿಸುವವರು ಹಿಂದಿನ ದಿನವೇ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ದಾಸೋಹದ ದಿನದಂದು ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರವಾಗಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು. ದೇವಾಲಯದಲ್ಲಿ ಈಗಾಗಲೇ ಒಂದು ಆಂಬುಲೆನ್ಸ್ ವ್ಯವಸ್ಥೆ ಇದ್ದು ಹೆಚ್ಚುವರಿಯಾಗಿ ಒಂದು ದಿನದ ಅವಧಿಗೆ ಮತ್ತೊಂದು ಆಂಬುಲೆನ್ಸ್ ನುರಿತ ವೈದ್ಯರು, ಚಾಲಕ ಹಾಗೂ ಅಗತ್ಯ ಸಿಬ್ಬಂದಿಗಳನ್ನು ದೇವಾಲಯದ ಹತ್ತಿರ ನಿಯೋಜಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಬೆಳಗ್ಗೆ ತಯಾರು ಮಾಡುವ ಪ್ರಸಾದದ ಗುಣಮಟ್ಟವನ್ನು ಅಧಿಕಾರಿಗಳು ಪರೀಕ್ಷಿಸಿ ಗುಣಮಟ್ಟದ ಪ್ರಮಾಣ ಪತ್ರ ನೀಡಬೇಕು, ಚಾಮುಂಡಿ ಬೆಟ್ಟಕ್ಕೆ ಹೊಸ ವರ್ಷದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಕಸದ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಒಂದು ದಿನದ ಮಟ್ಟಿಗೆ ಪಾಲಿಕೆ ವತಿಯಿಂದ 10 ಜನ ಪೌರಕಾರ್ಮಿಕರು, ಒಂದು ಕಾಂಪ್ಯಾಕ್ಟ್ ವಾಹನ ನಿಯೋಜಿಸಬೇಕು. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಹತ್ತುವ ಪಾದದ ಬಳಿ ತಾತ್ಕಾಲಿಕವಾಗಿ ಮೊಬೈಲ್ ಟಾಯ್ಲೆಟ್ ಸ್ಥಾಪಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.