ಮೈಸೂರು : ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಇಂದು ಬೆಳಗ್ಗೆ 8 ಗಂಟೆಯಲ್ಲಿ ಬಳ್ಳೂರು ಹುಂಡಿ ಗ್ರಾಮಕ್ಕೆ ಆನೆಗಳು ಎಂಟ್ರಿಕೊಟ್ಟಿದೆ.
ಗ್ರಾಮದ ಮುಖ್ಯ ರಸ್ತೆಯಲ್ಲಿಐದು ಆನೆಗಳು ಕಾಣಿಸಿಕೊಂಡಿದೆ. ರೈತರ ಜಮೀನುಗಳಿಗೆ ಆನೆಗಳು ನುಗ್ಗಿದೆ. ಬಾಳೆ ಬೆಳೆ, ಕುಂಬಳಕಾಯಿ ಬೆಳೆ ನಾಶವಾಗಿದೆ. ಗ್ರಾಮದ ಬಸವರಾಜು ಮತ್ತು ಮರಿಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಕುಂಬಳಕಾಯಿ ಬೆಳೆ ನಾಶವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಬಾರದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಿಬ್ಬಂದಿ ವಾಹನವನ್ನು ಸಂತ್ರಸ್ಥ ರೈತರು ಅಡ್ಡಗಟ್ಟಿದ್ದಾರೆ. ಆನೆಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ರಾತ್ರಿಯ ವೇಳೆ ಕಾಡಂಚಿನಲ್ಲಿ ಗೇಟ್ಗಳು ಹಾಕದೆ ಇರುವುದರಿಂದಲೇ ಆನೆಗಳು ಗ್ರಾಮಕ್ಕೆ ಬರುತ್ತಿವೆ. ಈ ಬಗ್ಗೆ ಅರಣ್ಯ ಸಿಬ್ಬಂದಿ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಂದಿನ ಘಟನೆಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಆನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

