ಮೈಸೂರು: ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾರಿನ ಚಕ್ರ ಹೂತು ಕೆಲಕಾಲ ಸಂಚಾರ ಅಸ್ತವ್ಯಸ್ತವಾದ ಘಟನೆ ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ನಡೆದಿದೆ. ಜೆಸಿಬಿ ಮೂಲಕ ಕಾರನ್ನ ಮೇಲಕ್ಕೆ ಎತ್ತಲಾಗಿದ್ದು ವಿಳಂಬ ಕಾಮಗಾರಿಯನ್ನ ಸ್ಥಳೀಯರು ಶಪಿಸಿದ್ದಾರೆ.

ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನ ದಿಂದ ಜೆ ಎಸ್ ಎಸ್ ಆಸ್ಪತ್ರೆ ಬಳಿ ಚಾಮುಂಡೇಶ್ವರಿ ದೇವಸ್ಥಾನದ ವರಗಿನ ರಸ್ತೆ ಕಾಮಗಾರಿ ಶುರುವಾಗಿ ವರ್ಷಗಳೇ ಕಳೆದಿವೆ. ಪದೇ ಪದೇ ಎರಡು ಮೂರು ಬಾರಿ ಅದೇ ರಸ್ತೆಯಲ್ಲಿ ಮತ್ತೆ ಮತ್ತೆ ಅಗೆದು ಕಾಮಗಾರಿ ಮಾಡುತ್ತಿದ್ದಾರೆ, ಇದುವರೆಗೂ ಪೂರ್ಣಗೊಂಡಿಲ್ಲ.

ಕಳಪೆ ಕಾಮಗಾರಿ ಎಂದು ಆರೋಪಿಸಿರುವ ಸಂಘಟಕರು ಕೂಡಲೇ ಕಾಮಗಾರಿಯನ್ನ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶಗುತ್ತಿರುವ ಕಿರಿಕಿರಿಯನ್ನ ತಪ್ಪಿಸುವಂತೆ ಆಗ್ರಹಿಸಿದ್ದಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ನಿರ್ವಹಣೆಗಾಗಿ ಪೊಲೀಸರೂ ಸಹ ಹರಸಾಹಸ ಮಾಡುತ್ತಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಲಿ ಅಥವಾ ನಗರ ಪೋಲಿಸ್ ಆಯುಕ್ತರಾಗಲಿ ಈ ರಸ್ತೆ ಗುತ್ತಿಗೆದಾರನ ಮೇಲೆ ಕೂಡಲೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.

ಕೂಡಲೇ ಕಾಮಗಾರಿ ಪೂರ್ಣವಾಗಿ ದುರಸ್ತಿ ಕಾರ್ಯ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.