ಮೈಸೂರು: ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳು ಮಾತ್ರವೇ ಇಲ್ಲ, ಇತರೆ ಕೋರ್ಸುಗಳು ಇವೆ. ಅವುಗಳನ್ನು ಓದಿಸಿ ಎಂದು ರೇಡಿಯೋ ಜಾಕಿ ಅವಿನಾಶ್ ಪೋಷಕರಿಗೆ ಸಲಹೆ ನೀಡಿದರು.

ಜೀನಿಯಸ್ ಎಂಎಂಸಿ ಕೋಚಿಂಗ್ ಸೆಂಟರ್ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೋಷಕರು ಅಕ್ಕಪಕ್ಕದ ಮನೆಯವರಿಗೆ ತಮ್ಮ ಮಗ ಸಾಫ್ಟ್‌ವೇರ್ ಎಂಜಿನಿಯರ್ ಎಂದು, ವಿದೇಶದಲ್ಲಿದ್ದಾನೆ ಎಂದು ಹೇಳಿಕೊಳ್ಳಲು ಎಂಜಿನಿಯರಿಂಗ್ ಕೋರ್ಸುಗಳಿಗೆ ಸೇರಿಸುತ್ತಿದ್ದಾರೆ.

ಆತನಿಗೆ ಇಷ್ಟವಿಲ್ಲದಿದ್ದರೆ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳನ್ನು ಪಾಸು ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಆತನ ಆಸಕ್ತಿ ಗಮನಿಸಿ, ನೀವು ಒತ್ತಡ ಹೇರಬೇಡಿ, ಬಿಬಿಎ, ಬಿಕಾಂ, ಎಂಬಿಎ ಓದಿದವರು, ಆರ್ಟ್ಸ್ ಓದಿದವರು ಕೂಡ ಒಳ್ಳೆಯ ಉದ್ಯೋಗದಲ್ಲಿ ಇದ್ದಾರೆ. ಆದ್ದರಿಂದ ಎಂಜಿನಿಯರ್ ಮಾಡಬೇಕು ಎಂದಿದ್ದರೆ ದೇಶ ಸೇವೆಗಾಗಿ ನೌಕಾದಳ, ಭೂ ಸೇನೆಗೆ ಬೇಕಾದ ಕೋರ್ಸುಗಳಿಗೆ ಸೇರಿಸಿ ಎಂದು ಹೇಳಿದರು.

ಮಕ್ಕಳಿಗೆ ಶಿಕ್ಷಣದ ಜತೆ ಜತೆಗೆ ಉತ್ತಮ ಸಂಸ್ಕಾರ ಕಲಿಸಿ, ವೇದ, ಉಪನಿಷತ್ತು, ರಾಮಾಯಣ, ಮಹಾಭಾರತದ ಬಗ್ಗೆ ತಿಳಿಸಿಕೊಡಿ. ಯುವಶಕ್ತಿ ಸರಿದಾರಿಯಲ್ಲಿ ಸಾಗಬೇಕಾದರೆ ಪೋಷಕರ ಮಾತು ಕೇಳಬೇಕು. ಅಪ್ಪ-ಅಮ್ಮ, ಗುರುಗಳು ಹಾಗೂ ಹೆಣ್ಣು ಮಕ್ಕಳಿಗೆ ಗೌರವ ನೀಡಿ, ವಿದ್ಯಾರ್ಥಿಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ, ಸಿಎನ್‌ಆರ್ ರಾವ್ ಅವರಂತಹವರು ಮಾದರಿಯಾಗಬೇಕು.

ಒಂದು ಕ್ಷಣ ಮೈ ಮರೆತರೆ ಅನಾಹುತವಾಗಿಬಿಡುತ್ತದೆ ಎಂಬ ಎಚ್ಚರಿಕೆ ಇರಬೇಕು. ಐಎಎಸ್ ಪರೀಕ್ಷೆ ಪಾಸು ಮಾಡುವ ಕಡೆ, ಮೂಲ ವಿಜ್ಞಾನ ಓದುವ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಶಾಂತಿ ಮತ್ತು ಅಹಿಂಸೆ, ಜ್ಞಾನದಿನ, ಯೋಗ ದಿನ ಹಾಗೂ ಆಧ್ಯಾತ್ಮ ಹಾಗೂ ಸಂಗೀತಕ್ಕೆ ಭಾರತ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿದೆ. ಇಂತಹ ಕನ್ನಡನಾಡಿನ ಮಕ್ಕಳು ಚೆನ್ನಾಗಿ ಓದಬೇಕು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಮಹತ್ವವಿದ್ದು, ವಿಶ್ವದೆಲ್ಲೆಡೆ ಉದ್ಯೋಗಾವಕಾಶಗಳು ಸಿಗುತ್ತಿವೆ. ಇದನ್ನು ಯುವಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಕೇಂದ್ರದ ಮುಖ್ಯಸ್ಥ ಪಿ.ಬಿ.ಚಂದ್ರಶೇಖರ್ ಮಾತನಾಡಿ, ಕಳೆದ 20ವರ್ಷಗಳಿಂದ ನಗರದ ವಿವಿಧೆಡೆ 11 ಶಾಖೆಗಳನ್ನು ತೆರೆದು, ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಜತೆಗೆ ಪೋಷಕರ ಸಹಕಾರವೂ ಕಾರಣ ಎಂದರು.

ನಾವು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಸ್ಕೆ ಪೂರಕವಾದ ಚಟುವಟಿಕೆಗಳನ್ನು ಕೂಡ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಗಣಿತದಲ್ಲಿ ನೂರಕ್ಕೆ ನೂರು ಅಂಕ ಸೇರಿದಂತೆ 623ಅಂಕ ಗಳಿಸಿ, ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿರುವ ಅನ್ವಿತಾ ಭಟ್ ಸೇರಿದಂತೆ ಅತ್ಯುತ್ತಮ ಅಂಕ ಗಳಿಸಿದ 85ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ವಿಜ್ಞಾನವನ್ನು ಪ್ರಾಯೋಗಿಕವಾಗಿ ಕಲಿಸುತ್ತಿರುವ ಬಾಬು ಹಾಗೂ ಶಿಕ್ಷಕ ಪ್ರಭುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ನಿರ್ಮಲಾ ಕಾನ್ವೆಂಟ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಮೇಶ್ ಸ್ವಾಗತಿಸಿದರು. ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದರಾಜ ನಾಯಕ್ ವರದಿ ಓದಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.