ನಂಜನಗೂಡು: ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಗ್ರಾಮ ಪಂಚಾಯಿತಿ ಕಟ್ಟಡವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದ್ದು ಗ್ರಾಮದ ಕೇಂದ್ರ ಕಛೇರಿಯಾಗಿದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಾಗ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಿದ್ದರು. ಹಾಗೆಯೇ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ಮಂಜೂರು ಮಾಡಿಕೊಟ್ಟಿದ್ದರು. ಕಳಲೆ ಗ್ರಾಮವೂ ದೊಡ್ಡ ಗ್ರಾಮವಾಗಿರುವುದರಿಂದ ಗ್ರಾಮದ ಅಭಿವೃದ್ಧಿಯನ್ನು ಹಂತಹಂತವಾಗಿ ಮಾಡಲಾಗುವುದು.

ದೇವಾಲಯದ ಜೀರ್ಣೋದ್ಧಾರ ಮತ್ತು ರಥ ನಿರ್ಮಾಣಕ್ಕೆ ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಕೇಳಿಕೊಂಡು ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ. ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ಬರುತ್ತಿದೆ. ಅನುದಾನವನ್ನು ಹಂಚಿಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾ. ಪಂ ಅಧ್ಯಕ್ಷ ಲತಾ ಡಿ. ಮಹೇಶ್, ಉಪಾಧ್ಯಕ್ಷ ಹರೀಶ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ಗ್ರಾಪಂ ಸದಸ್ಯರಾದ ಮಹೇಶ್, ಶಿವಣ್ಣ, ಸುಮ, ಲಕ್ಷ್ಮೀ, ಶಿವಕುಮಾರಿ, ರಾಜಮ್ಮ, ವಿಶಾಲಾಕ್ಷಮ್ಮ, ಶಾಂತಮ್ಮ, ರತ್ನಮ್ಮ, ಗೀತಾ , ಶಿವರಾಮ್, ಶಿವಕುಮಾರ್, ಮುಖಂಡರಾದ ಎನ್ ಮಹದೇವು, ಬೈರನಾಯಕ, ಕೆ. ಡಿ ಮಂಜು, ದೊರೆಸ್ವಾಮಿ ನಾಯಕ, ಮಂಜುನಾಥ್,  ಪ್ರದೀಪ್, ರಾಚ ನಾಯಕ, ಕಳಲೆ ರಾಜೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.