ನಂಜನಗೂಡು: ರಾಜ್ಯದ ರೈತರಿಗೆ ಸೇರಬೇಕಾದ ಯೂರಿಯ ಗೊಬ್ಬರ ಅನ್ಯ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಗೋಡನ್ ನಲ್ಲಿ ಗೊಬ್ಬರದ ಸಮೇತ ಸಿಕ್ಕಿಬಿದ್ದಿದ್ದಾರೆ.
ನಂಜನಗೂಡಿನ ಹುಲ್ಲಹಳ್ಳಿ ರಸ್ತೆಯಲ್ಲಿರುವ ಗೌಸಿಯ ರೈಸ್ ಮಿಲ್ ನ ಗೋಡನ್ ನಲ್ಲಿ ಅಕ್ರಮವಾಗಿ ಶೇಖರಣೆ ಮಾಡಿ ರುವುದನ್ನು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ದಾಳಿ ನಡೆಸಿ ಬೀಗ ಜಡಿಯಲಾಯಿತು.
ಕೇಂದ್ರ ಸರ್ಕಾರ ರೈತರಿಗೋಸ್ಕರ ಸಬ್ಸಿಡಿ ಮುಖಾಂತರ ರೈತರ ಅನುಕೂಲಕ್ಕಾಗಿ ಯೂರಿಯಾ ಗೋಬ್ಬರ ಸುಲಭವಾಗಿ ಸಿಗಲಿ ಎಂದು ಕಡಿಮೆ ಬೆಲೆ ನಿಗದಿಪಡಿಸಲಾಗಿರುತ್ತದೆ. ಆದರೆ, ಅಧಿಕ ಹಣಕ್ಕಾಗಿ ಅನ್ಯ ರಾಜ್ಯಗಳಿಗೆ ಆಕ್ರಮವಾಗಿ ಮಾರಾಟ ಮಾಡಿ ರೈತರಿಗೆ ವಂಚಿಸಿ ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ.
ಕಳೆದ 20 ದಿನಗಳಿಂದ ಎಷ್ಟು ಮೂಟೆ ಯೂರಿಯಾ ಆಕ್ರಮವಾಗಿ ಸಾಗಾಣಿಕೆ ಮಾಡಿದ್ದಾರೆ ಎಂಬುದನ್ನು ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕೃಷಿ ಅಧಿಕಾರಿ ರವಿ, ಕಂದಾಯ ಇಲಾಖೆ ಅಧಿಕಾರಿ ರಾಜು, ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನಿಲ್ ಕುಮಾರ್, ರೈತ ಮುಖಂಡ ರಘು ಹಾಜರಿದ್ದರು.

