ನಂಜನಗೂಡು: ನುಗು ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಂಜನಗೂಡಿನ ಹುಲ್ಲಹಳ್ಳಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು ಮೈಸೂರು -ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಕೇಂದ್ರ ಮತ್ತು ರಾಜ್ಯ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, 1959ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ, ಮೈಸೂರು ಮಹಾರಾಜರ ನೆರವಿನೊಂದಿಗೆ ನುಗು ಯೋಜನೆ ಪೂರ್ಣಗೊಂಡಿತು. ಈ ಯೋಜನೆಯಿಂದ ನಂಜನಗೂಡು ತಾಲ್ಲೂಕಿನ 17,000 ಎಕರೆ ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ 1,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿದೆ. ಪ್ರಸ್ತುತ ಜಲಾಶಯದಲ್ಲಿ 5 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಆದರೆ ಈಗ ಬೆಳೆದು ನಿಂತಿರುವ ಕಬ್ಬು, ಬಾಳೆ, ತೆಂಗು ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಬೋರ್ವೆಲ್‌ಗಳು ಬತ್ತಿವೆ. ಅಂತರ್ಜಲ ಕುಸಿದಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನುಗು ನೀರಿನಿಂದ ದೇವಿರಮ್ಮನಹಳ್ಳಿ, ಹುಂಡಿ, ಹಂಡುವಿನಹಳ್ಳಿ, ಮುದ್ದಹಳ್ಳಿ, ಕೆರೆಹುಂಡಿ, ಮಸಗೆ, ದೇಬೂರು, ಕರುಳಾಪುರ, ಶ್ರೀನಗರ, ಸಿಂಗಾರಿಪುರ, ಕಾಳಿಹುಂಡಿ, ಎಡತಲೆ, ಗೀಕಳ್ಳಿ, ಅಳಗಂಚಿಪುರ, ಹೊರಲವಾಡಿ, ಕೋಡಿ ನರಸೀಪುರ, ಸಿಂಧುವಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗುತ್ತದೆ.
ತಕ್ಷಣ ನಾಲೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ರೈತರಿಗೆ ಪ್ರತಿ ಎಕರೆಗೆ 50,000 ರೂ. ಬೆಳೆ ನಷ್ಟ ಪರಿಹಾರ ಘೋಷಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೇವು ಬ್ಯಾಂಕ್ ತೆರೆಯಬೇಕು ಎಂದು ಆಗ್ರಹಿಸಿದರು. ನಮ್ಮ ನೀರು ನಮ್ಮ ಹಕ್ಕು. ತಕ್ಷಣ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆಗೆ ಬೀಗ ಜಡಿಯುವ ಚಳುವಳಿ ಹಮ್ಮಿಕೊಳ್ಳುತ್ತೇವೆ ಎಂದು ಭಾಗ್ಯರಾಜ್ ಎಚ್ಚರಿಸಿದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಪರಿಣಾಮವಾಗಿ ಸಾಲುಗಟ್ಟಲೆ ವಾಹನಗಳು ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಸಮಯ ಟ್ರಾಫಿಕ್ ಜಾಮ್ ಕಂಡುಬಂದಿತು.
ಈ ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಹಂಡುವಿನಹಳ್ಳಿ ರಾಜು, ವಳಗೆರೆ ಗಣೇಶ್, ಮುದ್ದಹಳ್ಳಿ ಮಧು, ದೇವನೂರು ನಾಗೇಂದ್ರ, ಚಿದಂಬರ, ಸಿದ್ದರಾಮಪ್ಪ, ದೇವಣ್ಣ, ಮಹೇಶ್, ಡಿ.ಎಲ್. ಶಿವಣ್ಣ, ಕೃಷ್ಣಪ್ಪ, ಸಿದ್ದ, ಬಸಪ್ಪ, ಪರಮೇಶ್, ಸಿದ್ದಲಿಂಗ ಸ್ವಾಮಿ, ಪ್ರಭು ಸ್ವಾಮಿ, ರೇವಣ್ಣ, ಕೆಂಪರಾಜ್, ಚಂದ್ರು ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

