ಮೈಸೂರು: ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಸಿದ್ದರಾಮಯ್ಯನವರ ಪತ್ನಿ 14 ಸೈಟ್ ಅನ್ನು ಮರಳಿ ಮುಡಾಕ್ಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವರುಣಾ ಚುನಾವಣೆ ಸಂದರ್ಭದಲ್ಲೇ ನನಗೆ ಈ ಸೈಟ್ ದಾಖಲಾತಿ ಬಂದಿತ್ತು. ಪತ್ನಿ ಹೆಸರಿದೆ ವೈಯಕ್ತಿಕ ದಾಳಿ ಬೇಡ ಎಂದು ಸುಮ್ಮನಿದ್ದೆ. ರಾಜಕಾರಣಿಗಳೇ ನಿಮ್ಮ ಹೆಂಡತಿ, ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ. ಈ ಹಿಂದೆ ಸಿಎಂಗಳಾಗಿ ಜೈಲಿಗೆ ಹೋಗಿದ್ದು ಅವರ ಕುಟುಂಬದ, ಮಕ್ಕಳ ಕಾರಣಕ್ಕಾಗಿ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದರು.
ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲ ಅಲ್ವಾ? ಹೊಗಳು ಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡ ಪರಿಣಾಮ ಸಿಎಂ ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬಂದಿದೆ ಎಂದು ಹೇಳಿದರು.
ಎರಡೂವರೆ ತಿಂಗಳ ಹಿಂದೆಯೇ ನಾನು ಸಿಎಂಗೆ ನಿಮಗೆ ಬಂದ ಅಕ್ರಮ ಸೈಟ್ ವಾಪಸ್ ಕೊಟ್ಟು ಬಿಡಿ ಎಂದು ಹೇಳಿದ್ದೆ. ಸಿಎಂ ಅವರ ಇಷ್ಟು ವರ್ಷದ ರಾಜಕೀಯ ಜೀವನವನ್ನು 14 ಸೈಟ್ ನುಂಗಬಾರದು ಎಂದು ಅಂದೇ ಹೇಳಿದ್ದೆ. ಎರಡೂವರೆ ತಿಂಗಳ ಹಿಂದೆ ವಾಪಸ್ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ ಎಂದರು.

