ನಂಜನಗೂಡು: ನಂಜನಗೂಡು ತಾಲ್ಲೂಕಿನ ಹುಸ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 75ನೇ ಅಮೃತ ಮಹೋತ್ಸವವನ್ನು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.

75ನೇ ವರ್ಷ ತುಂಬಿದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಅಮೃತ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲೆಯ ಮುಖ್ಯ ದ್ವಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಹೇಶ್ ಉದ್ಘಾಟಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.

ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಹೇಶ್ ಮಾತನಾಡಿ, ಸರ್ಕಾರಿ ಶಾಲೆಗೆ 75ನೇ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಒಂದು ಗ್ರಾಮವನ್ನು ಗ್ರಾಮಸ್ಥರು ಅಭಿವೃದ್ಧಿ ಪಡಿಸಲು ಮನಸ್ಸು ಮಾಡಿದ್ರೆ ಏನೇನೆಲ್ಲಾ ಮಾಡಬಹುದು ಎಂಬುದಕ್ಕೆ ಹುಸ್ಕೂರು ಸರ್ಕಾರಿ ಶಾಲೆ ಮಾದರಿಯಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿದ್ಯೆ ಜೊತೆಗೆ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು.

ಪೋಷಕರು ತಮ್ಮ ಮಕ್ಕಳಿಗೆ ಟಿವಿ ಮತ್ತು ಮೊಬೈಲ್ ಗಳಿಂದ ದೂರವಿಡಬೇಕು. ಓದುವ ಸಮಯದಲ್ಲಿ ಮತ್ತು ಪರೀಕ್ಷಾ ವೇಳೆಯಲ್ಲಿ ಪೋಷಕರು ಎಚ್ಚರಿಕೆವಹಿಸಿ ಮಕ್ಕಳನ್ನು ಮನೆಗಳಲ್ಲಿ ಓದಿಸಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದಕ್ಕೂ ಕಡಿಮೆ ಇಲ್ಲ. ಸರ್ಕಾರಿ ಶಾಲೆಗಳನ್ನು ಉಳಿಸಬೇಕಾದರೆ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಮಕ್ಕಳು ಶೈಕ್ಷಣಿಕವಾಗಿ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಭಾಗ್ಯಸ್ವಾಮಿ, ಪಿಡಿಒ ಶರೀಫ್ ಗ್ರಾ.ಪಂ ಸದಸ್ಯರಾದ ನಾಗಮ್ಮ, ಸಣ್ಣಮ್ಮ, ಕಾಳಮ್ಮ, ರತ್ನಮ್ಮ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಂದ್ರ, ಡಯಟ್ ಹಿರಿಯ ಉಪನ್ಯಾಸಕಿ ನಳಿನಿ, ಮುಖಂಡರಾದ ಲಿಂಗರಾಜು,

ಶಿವಣ್ಣಶೆಟ್ಟಿ, ಮುಖ್ಯ ಶಿಕ್ಷಕಿ ಚಿಕ್ಕತಾಯಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಕರ, ಉಪಾಧ್ಯಾಯರ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ್ ದಳವಾಯಿ, ನಿಕಟಪೂರ್ವ ಕಾರ್ಯದರ್ಶಿ ರಂಗನಾಥ್, ಶಿಕ್ಷಕರಾದ ಶಾರದ, ಸುಧಾ ಸೇರಿದಂತೆ ಹಲವರು ಭಾಗವಹಿಸಿದ್ದರು.