ನಂಜನಗೂಡು: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನದ ಅಂಗವಾಗಿ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಸುಮೇಧ ಧ್ಯಾನ ಆವಾಸ ಹಾಗೂ ಬುದ್ಧ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಪೂಜ್ಯ ಶ್ರೀ ಸುಗತಪಾಲ ಭಂತೇಜಿ ಮತ್ತು ಪೂಜ್ಯ ಶ್ರೀ ಗೌತಮಿ ಭಂತೇಜಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬುದ್ಧ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಂಚಶೀಲ ತತ್ವಗಳನ್ನು ಬೋಧಿಸಲಾಯಿತು.
ನಂತರ ಅಭಿಧಮ್ಮ ವೇದಿಕೆಯಲ್ಲಿ ಅರಳಿ ಗಿಡಕ್ಕೆ ನೀರೆರೆಯುವ ಮೂಲಕ, ಬುದ್ಧ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಸುಗತಪಾಲ ಭಂತೇಜಿ ಮಾತನಾಡಿ, ಬುದ್ಧ ಎಂದರೆ ಜ್ಞಾನ ಮತ್ತು ಬೆಳಕು. ನಮ್ಮ ನಷ್ಟ, ಲಾಭ, ಸುಖ-ದುಃಖಗಳಿಗೆ ನಾವೇ ಕಾರಣ ಎಂಬುದನ್ನು ಬುದ್ಧ ಬೋಧಿಸಿದ್ದಾರೆ. ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷಗಳಾಗಿವೆ. ಮೈಸೂರು ಮಹಾರಾಜರು ಬುದ್ಧ ಮಂದಿರ ನಿರ್ಮಿಸದಿದ್ದರೂ, ಅವರ ಪರವಾಗಿ ದೇವನೂರು ಕೃಷ್ಣ ಅವರು ಈ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಚಿಂತಕ ದೇವನೂರು ಕೃಷ್ಣ ಮಾತನಾಡಿ, ಧಮ್ಮದ ಮೂಲಕ ಸುಖ, ಶಾಂತಿ ಮತ್ತು ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು. ಅಂಬೇಡ್ಕರ್ ಅವರನ್ನು ಹೊತ್ತು ಮೆರೆದಿದ್ದೇವೆ ಹೊರತು ಅವರ ತತ್ವಗಳನ್ನು ಅನುಸರಿಸಿಲ್ಲ ಎಂಬ ಕೊರಗು ಇನ್ನೂ ಇದೆ. ಬಾಬಾ ಸಾಹೇಬರು ಧಮ್ಮ ಸ್ವೀಕರಿಸಿ 70 ವರ್ಷಗಳ ಬಳಿಕವಾದರೂ ಅದರ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಸಮಾಧಾನಕರ ಸಂಗತಿ ಎಂದು ಹೇಳಿದರು.
ಬುದ್ಧ ದೇವರ ಬಗ್ಗೆ ಚಿಂತಿಸದೆ ಮನುಷ್ಯರ ಬಗ್ಗೆ ಚಿಂತಿಸಿದರು. ಮಾನವನೇ ಧಮ್ಮದ ಕೇಂದ್ರಬಿಂದು, ಮಾನವನ ಕಲ್ಯಾಣವೇ ಧಮ್ಮದ ಗುರಿ. ಪರಿಶುದ್ಧ ನಡೆ, ನುಡಿ ಮತ್ತು ಪರಿಶುದ್ಧ ಜೀವನವೇ ಧಮ್ಮದ ಸಾರ ಎಂದು ತಿಳಿಸಿದರು.
ಕೆಸರನ್ನು ಕೆಸರಿನಿಂದ ತೊಳೆಯಲು ಸಾಧ್ಯವಿಲ್ಲ; ಕತ್ತಲೆಯನ್ನು ಕತ್ತಲೆಯಿಂದ ದೂರ ಮಾಡಲು ಸಾಧ್ಯವಿಲ್ಲ. ಕತ್ತಲೆಯನ್ನು ಬೆಳಕಿನಿಂದ ಓಡಿಸಬೇಕು, ಕೆಸರನ್ನು ನೀರಿನಿಂದ ತೊಳೆಯಬೇಕು. ಅದೇ ರೀತಿ ಕೆಟ್ಟದ್ದನ್ನು ಒಳ್ಳೆಯತನದ ಮೂಲಕ ಗೆಲ್ಲಬೇಕು ಎಂದು ಹೇಳಿದರು.
ಅಕ್ಕ ಐಎಎಸ್ ಅಕಾಡೆಮಿಯ ಮುಖ್ಯಸ್ಥ ಡಾ. ಶಿವಕುಮಾರ್ ಮಾತನಾಡಿ, ಒಳ್ಳೆಯದನ್ನು ಮಾತನಾಡಬೇಕು, ಯೋಚಿಸಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಕಣ್ಣಿನಿಂದ ಒಳ್ಳೆಯದನ್ನು ನೋಡಬೇಕು. ಕೋಪ, ದ್ವೇಷ ಮತ್ತು ಅಸೂಯೆ ಮನುಷ್ಯನನ್ನು ದುಃಖದತ್ತ ಕೊಂಡೊಯ್ಯುತ್ತವೆ. ಆದ್ದರಿಂದ ಮನಸ್ಸನ್ನು ಹದವಾಗಿಟ್ಟುಕೊಂಡು ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ತಪ್ಪುಗಳನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರ ಬಗ್ಗೆ ಪ್ರೀತಿ ತೋರಿಸುವುದಷ್ಟೇ ಸಾಕಾಗುವುದಿಲ್ಲ; ಅವರ ವಿಚಾರಗಳು ಮತ್ತು ಬರಹಗಳನ್ನು ಓದಬೇಕು. ಧಮ್ಮದ ಪುಸ್ತಕಗಳು, ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಬರಹಗಳನ್ನು ಅಧ್ಯಯನ ಮಾಡಬೇಕು. ಪ್ರತಿ ಮನೆಯಲ್ಲೂ ಬುದ್ಧ ಮತ್ತು ಆತನ ಧಮ್ಮ ಪುಸ್ತಕವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಹಿರಿಯರು, ಗುರುಗಳು ಹಾಗೂ ತಂದೆ-ತಾಯಿಯನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಬದುಕಿನ ಜೊತೆಗೆ ಧರ್ಮದ ಪ್ರಚಾರ ಮತ್ತು ಅಧ್ಯಯನಕ್ಕೂ ಸಮಯ ಮೀಸಲಿಡಬೇಕು. ಅನಗತ್ಯ ವಿಚಾರಗಳಿಗೆ ಸಮಯ ವ್ಯರ್ಥ ಮಾಡುವ ಬದಲು ಬುದ್ಧ ಧಮ್ಮದ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮಹಿಳೆಯರು ಧಾರಾವಾಹಿಗಳಿಗೆ ಹೆಚ್ಚು ಸಮಯ ನೀಡುವುದನ್ನು ಬಿಟ್ಟು ಧಮ್ಮದ ಅಧ್ಯಯನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹೇಗೆ ಬದುಕಬೇಕು ಎಂಬುದನ್ನು ಬುದ್ಧ ಧಮ್ಮ ಕಲಿಸುತ್ತದೆ. ದಲಿತರು ಧಮ್ಮ ಸ್ವೀಕರಿಸುವ ವಿಚಾರದಲ್ಲಿ ಹಿಂಜರಿಯಬಾರದು. ಸ್ವಾಭಿಮಾನದ ಬದುಕಿಗಾಗಿ ಬಾಬಾ ಸಾಹೇಬರು ಬೌದ್ಧ ಧಮ್ಮದ ಹಾದಿಯನ್ನು ಆಯ್ಕೆ ಮಾಡಿಕೊಂಡರು. ಚಾಮರಾಜನಗರ ಮತ್ತು ಮೈಸೂರು ಭಾಗಗಳಲ್ಲಿ ಧಮ್ಮದ ಪಯಣ ಪರಿಣಾಮಕಾರಿಯಾಗಿ ಸಾಗುತ್ತಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ನೀಡಿದ್ದರು ಎಂದು ಸ್ಮರಿಸಿದ ಅವರು, ಜಾತಿಯ ಕಾರಣಕ್ಕೆ ದೌರ್ಜನ್ಯಗಳು ನಡೆಯುತ್ತಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಜ್ಯ ಶ್ರೀ ಗೌತಮಿ ಭಂತೇಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಎನ್. ಹರೀಶ್ ಕುಮಾರ್, ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ, ಶಿವಕುಮಾರ್, ದೇವನೂರು ಕೃಷ್ಣ, ನಿವೃತ್ತ ಶಿಕ್ಷಕ ಮಹದೇವಯ್ಯ ಚು.ನಾ ಬಸವಣ್ಣ,
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ನಗರ್ಲೆ ವಿಜಯಕುಮಾರ್, ಶಂಕರಪುರ ಸುರೇಶ್, ಆಲತ್ತೂರು ಶಿವರಾಜ್, ಮಹದೇವ್, ಹಗಿನವಾಳು ಚಿಕ್ಕಣ್ಣ, ಲೀಲಾವತಿ, ಸುಕನ್ಯಾ, ನಾಗರಾಜು, ಪ್ರಬುದ್ಧ, ಪ್ರದೀಪ್, ಕಾಂತರಾಜು, ಸಂಜು, ಸಚಿನ್, ಜನಾರ್ದನ, ಸುಬುದ್ಧ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಉಪಾಸಕರು ಹಾಜರಿದ್ದರು.

