ನಂಜನಗೂಡು: ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಮನೆ ಗೋಡೆ ಕುಸಿದು, ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಮ್ಮ ಅವರಿಗೆ ಸೇರಿದ ಮನೆ ಭಾರಿ ಮಳೆಗೆ ಹಾನಿಗೊಳಗಾಗಿದೆ. ಮನೆಯ ಗೋಡೆ ಕುಸಿದು ಬಿದ್ದಿದ್ದು, ಬಿರುಗಾಳಿಯ ರಭಸಕ್ಕೆ ಮೇಲ್ಛಾವಣಿಯೂ ಹಾರಿ ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು, ದವಸ-ಧಾನ್ಯ ಸೇರಿದಂತೆ ಹಲವು ವಸ್ತುಗಳು ಹಾನಿಗೊಳಗಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವುದರ ಜೊತೆಗೆ ನೊಂದ ಕುಟುಂಬಕ್ಕೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಮಹದೇವಮ್ಮ ಮನವಿ ಮಾಡಿದ್ದಾರೆ.
ಸರ್ಕಾರ ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಿ, ವಾಸಕ್ಕೆ ಯೋಗ್ಯವಾದ ಮನೆ ಮಂಜೂರು ಮಾಡಿಕೊಡಬೇಕು. ಮನೆ ಕಳೆದುಕೊಂಡ ಕುಟುಂಬಕ್ಕೆ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಸ್ಪಂದಿಸಬೇಕು ಎಂದು ಗ್ರಾಮದ ಯುವ ಮುಖಂಡ ಚೆಲುವಸ್ವಾಮಿ ಒತ್ತಾಯಿಸಿದ್ದಾರೆ.

