ಮೈಸೂರು : ಬಸವಮಾರ್ಗ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರದಿಂದ ಆಯೋಜಿಸಿದ್ದ 10 ದಿನಗಳ ಸಂಪೂರ್ಣ ಉಚಿತ ಕುಡಿತ ಬಿಡಿಸುವ ಶಿಬಿರದ ಸಮಾರೋಪ ಸಮಾರಂಭ ಹಿನ್ನೆಲೆಯಲ್ಲಿ ಹೆಬ್ಬಾಳಿನಲ್ಲಿರುವ ಶಾಖೆಯಲ್ಲಿ ವ್ಯಸನಿಗಳು ಹಾಗೂ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹೋಮ, ಹವನ, ಪೂಜೆಗಳನ್ನು ನಡೆಸಲಾಯಿತು.
ಈ ವೇಳೆ ಬಸವಮಾರ್ಗ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರದ ಸಂಸ್ಥಾಪಕ ಬಸವಣ್ಣ ಮಾತನಾಡಿ, ವ್ಯಸನಿಗಳ ಸೇವೆ ಭಗವಂತನ ಸೇವೆ ಎಂದುಕೊಂಡು ನಾನು ಈ ಕಾರ್ಯ ಮಾಡಿತ್ತಿದ್ದೇನೆ. ಈ ಪಯಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಬಸವ ಮಾರ್ಗ ಸಂಸ್ಥೆಗೆ ಭಗವಂತನೇ ಫೌಂಡರ್, ಮಠ ಮತ್ತು ದೇವಸ್ಥಾನದ ರೂಪದಲ್ಲಿ ಬಸವಮಾರ್ಗ ಆಗಬೇಕು.
ಒಬ್ಬ ವ್ಯಕ್ತಿ ಈ ಸೇವೆ ಮಾಡುವುದರಿಂದ ತುಂಬಾ ಜನರನ್ನು ತಲುಪಲು ಕಷ್ಟ ಸಾಧ್ಯ. ಆದ್ದರಿಂದ ಈ ಸಂಸ್ಥೆ ಸಮಾಜ ನಡೆಸುವಂತೆ ಆಗಬೇಕು. ಸಮಾಜ ಹಾಗೂ ವ್ಯಸನಿಗಳು ಯಾವ ಮುಖಾಂತರವಾದರೂ ಸಂಸ್ಥೆಗೆ ನೆರವು ನೀಡಬಹುದು. ಆ ನೆರವನ್ನು ನಾವು ಬಳಸಿಕೊಂಡು ವ್ಯಸನದಿಂದ ಬಳಲುತ್ತಿರುವ ಇತರರ ಬದಲಾವಣೆಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ಸಮಾಜದಿಂದ ತಿರಸ್ಕರಿಸಿದ ವ್ಯಸನಿಗಳಿಗೆ ಬಸವಮಾರ್ಗ ಸಂಸ್ಥೆ ಇದೆ ಎನ್ನುವುದನ್ನು ಮರೆಯಬಾರದು. ಈ ಸ್ಥಳದಲ್ಲಿ ನಾನು ಸುಳ್ಳು ಹೇಳುವುದಿಲ್ಲ, ಅಧರ್ಮ ಮಾಡುವುದಿಲ್ಲ. ನನ್ನ ಕೋನೆ ಉಸಿರು ಇರುವ ತನಕ ನಾನು ಇಲ್ಲಿ ನಿಮ್ಮ ಸೇವಕನಾಗಿ ಇರುತ್ತೇನೆ. ವ್ಯಸನಿಗಳ ಸೇವೆ ಮಾಡುತ್ತೇನೆ ಎಂದು ಹೇಳಿದರು.
ನಾನೂ ಕೂಡ ಸತತ 17 ವರ್ಷಗಳ ಕಾಲ ಈ ವ್ಯಸನಕ್ಕೆ ಬಲಿಯಾಗಿದ್ದೆ. ಇದರಿಂದ ಸಮಾಜದಲ್ಲಿ ಯಾವ ಬೆಲೆಯೂ ನನಗೆ ಸಿಗುತ್ತಿರಲಿಲ್ಲ. ಕೊನೆಗೆ ಕುಡಿತ ಬಿಡಬೇಕು ಎಂದು ದೊಡ್ಡ ಸಂಕಲ್ಪ ಮಾಡಿ ಅದರಿಂದ ಹೊರ ಬಂದು, ವ್ಯಸನಿಗಳಿಗಾಗಿ ಬಸವಮಾರ್ಗ ಸಂಸ್ಥೆ ಕಟ್ಟಲಾಗಿದೆ ಎಂದರು.
ಮಠಾಧೀಶರು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜಮುಖವಾಗಿ ಬಸವಮಾರ್ಗ ಸಂಸ್ಥೆ ನಡೆಯುತ್ತಿದೆ. ಸಂಸ್ಥೆ ನಿರ್ಮಾಣಕ್ಕೆ ನಮ್ಮ ಕುಟುಂಬ ಸಹಕಾರ ನೀಡುತ್ತಿದೆ. ಆದರೆ ಸಂಸ್ಥೆಯಿಂದ ಬಂದ ಹಣದಲ್ಲಿ ಒಂದೇ ಒಂದು ರೂಪಾಯಿಯನ್ನೂ ನಾವು ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಆ ಹಣವನ್ನು ವ್ಯಸನಿಗಳ ಬಲವರ್ಧನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ಸಂಸ್ಥೆಯಿಂದ ಇದುವರೆಗೂ 45 ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗಿದೆ. ಸಾವಿರಾರು ಜನರು ಈ ಶಿಬಿರದ ಲಾಭ ಪಡೆದಿದ್ದಾರೆ. ಅವರಂತೆ ನೀವು ಕೂಡ ಬದಲಾವಣೆ ಆಗಬೇಕು. ಶಿಬಿರದಲ್ಲಿ ದೊರಕಿದ ಯೋಗ, ಸಂತ್ಸಂಗ ಕಾರ್ಯಕ್ರಮ, ಆಟೋಟ, ಮನೋರಂಜನಾ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ತರಗತಿಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು. ಆ ಮೂಲಕ ಈ ಚಟದಿಂದ ಹೊರ ಬಂದು ನಿಮ್ಮ ಮನೆ ಹಾಗೂ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಾಳಬೇಕು. ಇದೆ ನಮ್ಮ ಸಂಸ್ಥೆಯ ಬಹುದೊಡ್ಡ ಆಶಯವಾಗಿದೆ ಎಂದು ತಿಳಿಸಿದರು.
ಸಚೀನ್ ಶರ್ಮಾ ಅವರ ನೇತೃತ್ವದಲ್ಲಿ ಪೂಜೆ ನಡೆಯಿತು. ಸಮಾರಂಭದ ಹಿನ್ನೆಲೆಯಲ್ಲಿ ಅನ್ನದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವ್ಯಸನಿಗಳ ಪಾಲಕರು, ಸಂಸ್ಥೆಯ ಸಿಬ್ಬಂದಿ, ಮಹೇಶ್, ಬಾಲು, ನವೀನ್ ಕುಮಾರ್, ರಾಘವೇಂದ್ರ, ಸಂಜಯ್, ಬಸವರಾಜು, ದರ್ಶನ್, ನಂದೀಶ್ ಇತರರು ಇದ್ದರು.

