ಮೈಸೂರು: 25 ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಪವಿತ್ರ ಜ್ಯುಬಿಲಿ ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಚರ್ಚ್ ನಲ್ಲಿ ಡಿ.29ರಿಂದ ಆಚರಿಸಲಾಗುತ್ತಿದೆ ಎಂದು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್ ಮೊರಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಪ್ ಸೂಚನೆಯಂತೆ 2025ನ್ನು ಪವಿತ್ರ ಜ್ಯುಬಿಲಿ ವರ್ಷವೆಂದು ಆಚರಿಸಲಾಗುತ್ತಿದ್ದು, ಡಿ.24ರಂದೇ ಪೋಪ್ ಚಾಲನೆ ನೀಡಿದ್ದಾರೆ. ಮೈಸೂರು ಧರ್ಮ ಪ್ರಾಂತ್ಯದಲ್ಲಿ ಡಿ.29ರಂದು ಆಚರಿಸಲಾಗುತ್ತಿದೆ. ಅಂದು ಸಂಜೆ ನಾಲ್ಕಕ್ಕೆ ಬನ್ನಿಮಂಟಪದ ದೀನರ ಮಾತೆ ದೇವಾಲಯದಿಂದ 8 ಅಡಿ ಎತ್ತರದ ವಿಶೇಷ ಶಿಲುಬೆಯ ಮೆರವಣಿಗೆ ಹೊರಟು ಸಂತ ಫಿಲೋಮಿನಾ ಚರ್ಚ್ ತಲುಪುತ್ತದೆ.
ಬಳಿಕ ಸಂಜೆ 6 ಗಂಟೆಗೆ ಚರ್ಚ್ ಆವರಣದಲ್ಲಿ ಬಲಿಪೂಜೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಲಿವೆ. ಈ ವೇಳೆ ಕ್ರೈಸ್ತ ಭಕ್ತಿ ಗೀತೆ ಹಾಡಲಾಗುವುದು. ಇದರಲ್ಲಿ ಧರ್ಮ ಪ್ರಾಂತ್ಯದ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ನಾಲ್ಕು ಜಿಲ್ಲೆಗಳ ಸುಮಾರು ಐದರಿಂದ ಆರು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ, ವಿವಿಧ ಚರ್ಚ್, ಸಂಸ್ಥೆಗಳು, ಜಿಲ್ಲಾ ಕೇಂದ್ರಗಳಲ್ಲಿ ವರ್ಷವಿಡೀ ಆಧ್ಯಾತ್ಮಿಕ, ಸಾಮಾಜಿಕ ಚಟುವಟಕೆ ಹಮ್ಮಿಕೊಳ್ಳಲಾಗುವುದು. ಜ್ಯುಬಿಲಿ ವರ್ಷ 2026ರ ಜ.6ಕ್ಕೆ ಅಂತ್ಯವಾಗಲಿದ್ದು, ಬಳಿಕ ಶಿಲುಬೆಯನ್ನು ಚರ್ಚ್ ನ್ನು ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಜಗತ್ತಿನಾದ್ಯಂತ ಹವಾಮಾನ ಬದಲಾವಣೆ, ಯುದ್ಧದ ಪರಿಸ್ಥಿತಿ ಇದ್ದು, ಇದರಿಂದಾಗಿ ಜಗತ್ತಿನ ಜನತೆ ಕಂಗೆಟ್ಟಿದ್ದಾರೆ. ಜನರಲ್ಲಿ ಪ್ರಾರ್ಥನೆ, ಪ್ರೀತಿ, ವಿಶ್ವಾಸದಿಂದ ಭರವಸೆ ಮೂಡಿಸಿ, ಶಾಂತಿ ನೆಲೆಸುವಂತೆ ಮಾಡಬೇಕಿದೆ. ಹೀಗಾಗಿ ಈ ಜ್ಯುಬಿಲಿಯಲ್ಲಿ ಭರವಸೆಯ ಯಾತ್ರಿಕರು ವಿಷಯ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಧರ್ಮಗುರುಗಳಾದ ಸ್ಟ್ಯಾನ್ಲಿ ಅಲ್ಮೆಡಾ, ಸೆಬಾಸ್ಟಿನ್, ಜೋಸೆಫ್ ಮರಿ, ಫಾಕಿಯ ರಾಜ್ ಇದ್ದರು.

