ನಂಜನಗೂಡು: ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಹನುಮನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು. ಸಭೆಯನ್ನು ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ ಸರ್ವೇಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹನುಮನಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 5.7 ಲಕ್ಷ ನಿವ್ವಳ ಲಾಭ ಬಂದಿದ್ದು, 2.41 ಲಕ್ಷ ರೂ. ರೈತರಿಗೆ ಬೋನಸ್ ನೀಡಲಾಗಿದೆ. ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿದರೆ ಸಂಘವು ಆರ್ಥಿಕವಾಗಿ ಲಾಭದತ್ತ ಹೋಗುತ್ತದೆ. ಆದ್ದರಿಂದ ರೈತರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಸದಾನಂದ ಮಾತನಾಡಿ, ಹನುಮನಪುರ ಡೈರಿಯಿಂದ 1.86 ಕೋಟಿ ರೂ. ಹಾಲನ್ನು ಸರಬರಾಜು ಮಾಡಲಾಗುತ್ತದೆ. ಸಂಘಕ್ಕೆ 5.7 ಲಕ್ಷ ಲಾಭ ಬಂದಿದ್ದು, ಸಂಘವು ಲಾಭದತ್ತ ನಡೆಯುತ್ತಿದೆ. ಉತ್ಪಾದಕರ ಸಮಸ್ಯೆ ಜೊತೆ ಬಳಕೆದಾರರ ಸಮಸ್ಯೆಯನ್ನು ನಾವು ಆಲಿಸಬೇಕು. ಇತ್ತೀಚಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದೇವೆ. ನಮ್ಮ ಸಂಘದ ಬಾಗಿಲು ಹಾಕಿದರೆ ಖಾಸಗಿ ಹೊಡೆತನದ ಸಂಸ್ಥೆಗಳು ಬಂದು ಕೂರುತ್ತವೆ. ಇದರಿಂದ ರೈತರಿಗೆ ತುಂಬಾ ಸಮಸ್ಯೆಗಳು ಆಗಲಿದೆ.
ಸದೃಢ ಸಮಾಜದ ಜೊತೆ ಆರ್ಥಿಕ ಸದೃಢತೆಯು ಮುಖ್ಯವಾಗಿದೆ. ರೈತರ ಕಲ್ಯಾಣಕ್ಕಾಗಿ ಸಹಕಾರ ಸಂಘಗಳು ಶ್ರಮಿಸುತ್ತಿವೆ. ಅದಕ್ಕಾಗಿ ಸರ್ಕಾರಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಸಹಕಾರ ಸಂಘದ ಸದಸ್ಯರು ಮತ್ತು ಉತ್ಪಾದಕರು ಬಾಂಧವ್ಯದಿಂದ ಮುಂದುವರಿಸಿಕೊಂಡು ಹೋಗಬೇಕು. ಇದಕ್ಕಾಗಿಯೇ ಮೈಸೂರು ಹಾಲು ಒಕ್ಕೂಟ ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ನಾಲ್ಕು ಲಕ್ಷ ಲೀಟರ್ ಮೈಸೂರು ನಗರಕ್ಕೆ ಹೋಗುತ್ತಿದೆ. 7 ಲಕ್ಷ ಲೀಟರ್ ಹಾಲು ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಉಳಿದ ಎರಡು ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಲ್ಲಿ ಹಾಲನ್ನು ವಿತರಿಸಲಾಗುತ್ತಿದೆ.
ಸಿದ್ದರಾಮಯ್ಯನವರು ಕ್ಷೀರ ಭಾಗ್ಯ ಯೋಜನೆ ಮಾಡದಿದ್ದರೆ ತುಂಬಾ ಕಷ್ಟವಾಗುತ್ತಿತ್ತು. ಕ್ಷೀರ ಭಾಗ್ಯದಿಂದ ಹಾಲು ಉಳಿಯುತ್ತಿಲ್ಲ, ಶಾಲಾ ಮಕ್ಕಳಿಗೆ ಹೋಗುತ್ತಿದೆ. ಹಾಗೆಯೇ ಯಡಿಯೂರಪ್ಪನವರು ಉತ್ಪಾದಕರಿಗೆ 3 ರೂ. ಪ್ರೋತ್ಸಾಹ ಧನ ನೀಡಿದ್ದರು. ಅದನ್ನು ಸಿದ್ದರಾಮಯ್ಯನವರು 5 ರೂ.ಗೆ ಏರಿಕೆ ಮಾಡಿ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವವರಿಗೆ 5 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಜಿ ಮಹೇಶ್ ಮಾತನಾಡಿ, ರೈತರು ಆದಷ್ಟು ಬೇಗ ಹಾಲನ್ನು ಸರಬರಾಜು ಮಾಡಬೇಕು. ಖಾಸಗಿ ಡೈರಿಗಳಿಂದ ಪೈಪೋಟಿ ಏರ್ಪಟ್ಟಿದೆ. ಉತ್ಪಾದಕರಿಗೆ ವಿಮೆ ಯೋಜನೆಯಿಂದ ಒಂದು ಲಕ್ಷ ರೂ. ಸಿಗಲಿದೆ. ರೈತ ಕಲ್ಯಾಣದಿಂದಲೂ ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್. ವೀಣಾ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ ಸರ್ವೇಶ್, ಉಪಾಧ್ಯಕ್ಷ ಎಸ್ ರಾಜು, ನಿರ್ದೇಶಕರಾದ ನಿರ್ಮಲ, ನಾಗಮ್ಮ, ನಾಗೇಂದ್ರ ಪ್ರಸಾದ್, ಮಹದೇವಸ್ವಾಮಿ, ಉಮೇಶ್, ನಂಜುಂಡಸ್ವಾಮಿ, ಪ್ರಕಾಶಪ್ಪ, ಮಹಾಲಿಂಗಪ್ಪ, ಮಹದೇವೇಗೌಡ, ಆರ್ ರಾಘವೇಂದ್ರ, ಮುಖ್ಯ ಕಾರ್ಯನಿರ್ವಾಹಕ ಎಸ್ ರವಿ, ಹಾಲು ಪರೀಕ್ಷಕ ಎಂ ಮಲ್ಲೇಶ್, ಹೆಚ್.ಎಂ ಮಹದೇವಸ್ವಾಮಿ, ಮಂಜುನಾಥ್ ಸೇರಿದಂತೆ ಹಾಲು ಉತ್ಪಾದಕರು ಹಾಜರಿದ್ದರು.

