ಮೈಸೂರು: ಕೋಟೆ ಆಂಜನೇಯ ಸ್ವಾಮಿ ದೇವಾಲಯ ಬಳಿ ವಿಜೃಂಭಣೆಯಿಂದ  ಹನುಮ ಜಯಂತಿ ಉತ್ಸವ ಸಾಗಿತು. ಆಂಜನೇಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ  ಶಾಸಕ ಜಿಟಿ ದೇವೇಗೌಡ, ಶಾಸಕ ಜಿಡಿ ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಎಲ್ ನಾಗೇಂದ್ರ ಚಾಲನೆ ಕೊಟ್ಟರು.

ಸುಮಾರು 12 ಹನುಮ ಉತ್ಸವ ಮೂರ್ತಿ ಮೂಲಕ ನಗರದೆಲ್ಲೆಡೆ ಮೆರವಣೆಗೆ ನಡೆಸಲಾಯಿತು. ತಮಟೆ ಸೇರಿದಂತೆ ಡೊಳ್ಳು ಕುಣಿತ ಸಾಂಸ್ಕೃತಿಕ ಕಲಾ ತಂಡಗಳು ಹನುಮ ಜಯಂತಿಯಲ್ಲಿ ಭಾಗಿಯಾದವು. ಕೇಸರಿ ಬಾವುಟ ಹಿಡಿದು ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತು.

ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಕಲಾ ಮಂದಿರಕ್ಕೆ ಮೆರವಣಿಗೆ ತಲುಪಲಿದೆ. ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆಯಲ್ಲಿ ಹನುಮ ಮೆರವಣಿಗೆ ನಡೆಯಿತು. ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಯಿತು. ಕೇಸರಿ ಶಾಲು ತೊಟ್ಟು ಮೆರವಣಿಗೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾದರು.