ನಂಜನಗೂಡು : ನಂಜನಗೂಡು–ಗುಂಡ್ಲುಪೇಟೆ ರಸ್ತೆಯ ರಾಷ್ಟ್ರೀಯ ಹೆದ್ದಾರಿ 766ರ ಹಿರಿಕಾಟಿ ಗೇಟ್ ಸಮೀಪ ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಬೈಕ್ ಸವಾರರಿಗೆ ತೀವ್ರ ಗಾಯಗಳಾಗಿವೆ.

ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಅಪಘಾತದ ಸ್ಥಳವನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು. ಗಾಯಾಳುಗಳ ಸ್ಥಿತಿ ಪರಿಶೀಲಿಸಿ, ಪ್ರತ್ಯೇಕ ವಾಹನದ ಮೂಲಕ ಗಾಯಾಳುಗಳನ್ನು ಸಮೀಪದ ಬೇಗೂರು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

ಅಪಘಾತದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಈ ವೇಳೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಖುದ್ದಾಗಿ ಸ್ಥಳದಲ್ಲೇ ನಿಂತು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಸಂಚಾರ ಸಮಸ್ಯೆಯನ್ನು ನಿಯಂತ್ರಿಸಿದರು.

ಸದ್ಯ ಗಾಯಾಳುಗಳ ವಿವರಗಳು ಲಭ್ಯವಾಗಿಲ್ಲ. ಆದರೆ ಅಪಘಾತದ ಸಂದರ್ಭದಲ್ಲೇ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನಡೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.