ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರು ಗುದ್ದಲಿ ಪೂಜೆ ನೆರವೇರಿಸಿದರು.

ಚುಂಚನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯ ಬಸ್ ನಿಲ್ದಾಣದ ಬಳಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲು ಗ್ರಾಮದ ಮುಖಂಡರು , ಸ್ಥಳೀಯ ಜನಪ್ರತಿನಿಧಿಗಳು ಮತ್ತು ವಿಮೋಚನಾ ಯುವಕರ ಸಂಘದ ಪದಾಧಿಕಾರಿಗಳು, ಬುದ್ಧ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗುದ್ದಲಿ ಪೂಜೆ ಮಾಡಿದರು.

ನಂತರ ಹಿರಿಯ ಹೋರಾಟಗಾರ ಚು.ನಾ ಬಸವಣ್ಣ ಮಾತನಾಡಿ, ಗ್ರಾಮದಲ್ಲಿ ಸುಮಾರು ಆರು ತಿಂಗಳಿನಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಮತ್ತು ಯುವಕರು ಚರ್ಚೆ ನಡೆಸಿದ್ದೇವೆ. ನಮ್ಮ ಗ್ರಾಮದಲ್ಲಿ ವಿಶೇಷವಾಗಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗಲಿದೆ. ಪ್ರವಾಸಿ ತಾಣವನ್ನಾಗಿ ಮಾಡಲಾಗುತ್ತದೆ ಎಂದರು.

ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಿ.ಎಂ ಮಹದೇವಯ್ಯ ಮಾತನಾಡಿ, ನಮ್ಮ ಗ್ರಾಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಅಂಬೇಡ್ಕರ್ ಅವರ ಪ್ರತಿಮೆ ನಮ್ಮೆಲ್ಲರಿಗೂ ಸ್ಪೂರ್ತಿಯ ಸಂಕೇತ. ಕಾಮಗಾರಿಯ ಯಾವುದೇ ಅಡೆ-ತಡೆ ಇಲ್ಲದೆ ಆದಷ್ಟು ಬೇಗ ನೆರವೇರಲಿ. ಮುಂದಿನ ಆರು ತಿಂಗಳಲ್ಲಿ ಪ್ರತಿಮೆ ಅನಾವರಣಗೊಳ್ಳಲಿ. ಎಲ್ಲರ ಸಹಕಾರವನ್ನು ಪಡೆದುಕೊಂಡು ನಮ್ಮ ಗ್ರಾಮದಲ್ಲಿ ಮಾದರಿಯಾಗಿ ಪ್ರತಿಮೆ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ರಾಜಕಾರಣವನ್ನು ಮಾಡದೆ ಪ್ರತಿಮೆ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಬುದ್ಧ ಧಮ್ಮ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಎಂ ಅಂಕಯ್ಯ ಮಾತನಾಡಿ, ಯುವಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಒಮ್ಮತದಿಂದ ಎಲ್ಲರೂ ಸೇರಿ ಮುಂದೆ ಬಂದಿದ್ದಾರೆ. ನಮ್ಮ ಆಸೆ ನೆರವೇರುತ್ತದೆ. ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಪ್ರಯತ್ನ ಬಹಳ ಮುಖ್ಯವಾಗಿರುತ್ತದೆ. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಾಗ ಟೀಕೆ ಟಿಪ್ಪಣಿಗಳು ಬರುವುದು ಸಹಜ. ಅದನ್ನು ಗಣನೆಗೆ ತೆಗೆದುಕೊಳ್ಳದೆ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ನಾಗಯ್ಯ, ಸುರೇಶ್, ಮಹದೇವ, ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸಿಎಂ ಮಹದೇವಯ್ಯ, ಗ್ರಾ.ಪಂ ಸದಸ್ಯರಾದ ಡಿ.ಎಂ ಮಹದೇವ್, ದಸಂಸ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಕಾಂಗ್ರೆಸ್ ಮುಖಂಡ ಪಿ.ಮಹದೇವಸ್ವಾಮಿ, ಬುದ್ಧ ಧಮ್ಮ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿಎಂ ಅಂಕಯ್ಯ, ಗೌರವ ಸಲಹೆಗಾರ ಎಸ್ .ಮಹದೇವಯ್ಯ, ವಿಮೋಚನಾ ಯುವಕರ ಸಂಘದ ಅಧ್ಯಕ್ಷ ಜಿ.ಮಹೇಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಮುಖಂಡರಾದ ರವಿ, ಸಿಎಂ ಮಲ್ಲೇಶ್, ಮಧು, ಸಿದ್ದರಾಜು, ಮಧುಕರ, ಪುರುಷೋತ್ತಮ್, ಸಿದ್ದಯ್ಯ, ಸೋಮೇಶ್, ಮದನ್, ಮಹೇಶ್, ಮುದ್ದಣ್ಣ ಸೇರಿದಂತೆ ವಿಮೋಚನಾ ಯುವಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಹಾರಾಷ್ಟ್ರದ ಚೌಡರ್ (ಚಾವ್ದಾರ್ ಕೆರೆ) ಕೆರೆಯಲ್ಲಿ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಿರುವ ಮಾದರಿಯಲ್ಲಿಯೇ ನಿರ್ಮಾಣ ಮಾಡಲು ಚುಂಚನಹಳ್ಳಿ ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ. ಚುಂಚನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಮಹಾರಾಷ್ಟ್ರದ ಮಾದರಿಯಲ್ಲಿ ಪ್ರತಿಮೆ ನಿರ್ಮಾಣವಾಗಲಿದೆ. ಜೊತೆಗೆ ಅಂಬೇಡ್ಕರ್ ಅವರ ಸಾಧನೆ ಕುರಿತು ಮ್ಯೂಸಿಯಂ ಮಾಡಲು ಚಿಂತಿಸಲಾಗಿದೆ. ಅಲ್ಲದೆ ಪ್ರತಿಮೆ ನೋಡಲು ಬರುವ ಪ್ರವಾಸಿಗರಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಗ್ರಂಥಾಲಯವನ್ನು ಒಳಗೊಂಡಂತೆ ಹಾಗೂ ಬುದ್ಧ ಮತ್ತು ಬಸವಣ್ಣನವರ ಪ್ರತಿಮೆಗಳನ್ನು ಸ್ಥಾಪನೆ ಮಾಡಲು ಆಲೋಚಿಸಿದ್ದಾರೆ. ಒಟ್ಟಾರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಒಂದೇ ಕಡೆ ನಿರ್ಮಾಣ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.