ನಂಜನಗೂಡು: ಸರ್ಕಾರಕ್ಕೆ ತೆರಿಗೆ ಹಣವನ್ನು ಪಾವತಿಸದೆ ವಂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಜುಲೈ 2 ರಂದು ಅಂಬೇಡ್ಕರ್ ಸೇನೆಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅಂಬೇಡ್ಕರ್ ಸೇನೆಯ ಮೈಸೂರು ಜಿಲ್ಲಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಹೇಳಿದರು.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಸೇನೆ ನಂಜನಗೂಡು ತಾಲ್ಲೂಕು ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ, ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ವನಜಾ ಕಾಂಕ್ರೀಟ್ ಪ್ರಾಡಕ್ಟ್ ಕಂಪನಿಯ ಮಾಲೀಕರು ಕಾನೂನು ಉಲ್ಲಂಘನೆ ಮಾಡಿ ಪರವಾನಿಗೆ ನವೀಕರಿಸದೆ ಕಂಪನಿಯನ್ನು ನಡೆಸಿಕೊಂಡು ಬಂದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿಗೆ ತೆರಿಗೆ ಹಣವನ್ನು ಕಟ್ಟದೆ ವಂಚಿಸಲಾಗಿದೆ. ಹೆಡತಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ 394,79,279/3 ರಲ್ಲಿ ಎರಡು ಎಕರೆ ಜಮೀನಿನು ಭೂ ಪರಿವರ್ತನೆ ಮಂಜುರಾಗಿದ್ದು, 2016 ರವರೆಗೆ ತೆರಿಗೆ ಹಣವನ್ನು ಪಾವತಿಸಲಾಗಿದೆ. ಇನ್ನುಳಿದ ವರ್ಷದಲ್ಲಿ ಯಾವುದೇ ತೆರಿಗೆಯನ್ನು ಪಾವತಿ ಮಾಡಿಲ್ಲ. ಕಟ್ಟಡ ಲೈಸೆನ್ಸ್, ನಕ್ಷೆ, ಅನುಮೋದನೆ ಪಡೆಯದೆ ಕಟ್ಟಡಗಳನ್ನು ನಿರ್ಮಿಸಿ ಕಲ್ಯಾಣ ಮಂಟಪವನ್ನು ತೆರೆದು ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವಾಸದ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ.

ಇದಕ್ಕೆ ಯಾವುದೇ ತೆರಿಗೆಯನ್ನು ನೀಡಿಲ್ಲ. ಹೆಡತಲೆ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳು ಅಕ್ರಮವಾಗಿವೆ. ಎರಡು ಮೂರು ವರ್ಷಗಳ ಹಿಂದೆ ನಡೆದಿರುವ ಕೆಲಸ ಕಾರ್ಯಗಳಿಗೆ ಹಣವನ್ನು ಮತ್ತೆ ಜಮೆ ಮಾಡುತ್ತಿದ್ದಾರೆ. ಹಾಗೆಯೇ ಈ ಹಿಂದೆ ಕೂಲಿ ಕೆಲಸ ಮಾಡಿದವರನ್ನು ಬಿಟ್ಟು ಬೇರೆ ಮಧ್ಯವರ್ತಿಗಳ ಹೆಸರಿಗೆ ಹಣವನ್ನು ಹಾಕುತ್ತಿದ್ದಾರೆ. ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಸುರಗಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಲೀಕರು ತೆರಿಗೆಯನ್ನು ಪಾವತಿಸದೆ ವಂಚಿಸಿದ್ದಾರೆ.

ತೆರಿಗೆ ಭ್ರಷ್ಟಾಚಾರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಜುಲೈ 2ರಂದು ನಂಜನಗೂಡು ತಾಲ್ಲೂಕು ಪಂಚಾಯಿತಿಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬರುವ ತನಕ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ತಿಳಿಸಿದರು.

ನಂತರ ಗೌರವಾಧ್ಯಕ್ಷ ಗೀತಹಳ್ಳಿ ಮಹದೇವಸ್ವಾಮಿ ಮಾತನಾಡಿ, ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಹಣವನ್ನು ಪಾವತಿಸದೆ ಸರ್ಕಾರಕ್ಕೆ ಮುಂಚಿಸಲಾಗುತ್ತಿದೆ. ಲಕ್ಷಾಂತರ ತೆರಿಗೆ ಹಣವನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೂಡಲೇ ಸರ್ಕಾರ ಇಂತಹ ಭ್ರಷ್ಟ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೆಲಸದಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನೆ ನಡೆಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಗೀಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಸಂಚಾಲಕ ಬೊಕ್ಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮುಳ್ಳೂರು ಸ್ವಾಮಿ, ತಾಲ್ಲೂಕು ಅಧ್ಯಕ್ಷ ಜೆ.ಮಹದೇವ ಕುಮಾರ್, ಸುರೇಂದ್ರ, ಚಿನ್ನಯ್ಯ, ಕಳಲೆ ಮಹೇಶ್ ಹಾಜರಿದ್ದರು.