ನಂಜನಗೂಡು: ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ವಿಭಾಗೀಯ ಸಂಚಾಲಕ ಮಂಜು ಶಂಕರಪುರ ಮಾತನಾಡಿ, “ಯುವ ಶಾಸಕರಾಗಿರುವ ದರ್ಶನ್ ಧ್ರುವನಾರಾಯಣ್ ಅವರು ಅಲ್ಪಾವಧಿಯಲ್ಲೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜನಪರ ಕಾಳಜಿ ಹೊಂದಿರುವ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿದರೆ ಜಿಲ್ಲೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ” ಎಂದು ಒತ್ತಾಯಿಸಿದರು.

“ಅವರ ತಂದೆ, ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್. ಧ್ರುವನಾರಾಯಣ್ ಅವರು ಕಾಂಗ್ರೆಸ್ ಪಕ್ಷವನ್ನು ನಿಷ್ಠೆಯಿಂದ ಸಂಘಟಿಸಿ, ದಲಿತರು, ಹಿಂದುಳಿದ ವರ್ಗಗಳು ಹಾಗೂ ಬಡವರ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಅವರ ಕೊಡುಗೆ ಅಪಾರ. ಅಂತಹ ಹಿರಿಯ ನಾಯಕರ ಪುತ್ರನಿಗೆ ಸಚಿವ ಸ್ಥಾನ ನೀಡುವ ಮೂಲಕ ಪಕ್ಷವು ಧ್ರುವನಾರಾಯಣ್ ಅವರ ಸೇವೆಯನ್ನು ಸ್ಮರಿಸಬೇಕು” ಎಂದು ಹೇಳಿದರು.

“ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದಡಿ ದಲಿತ ಸಮುದಾಯಕ್ಕೆ ಹಾಗೂ ಯುವ ನಾಯಕತ್ವಕ್ಕೆ ಆದ್ಯತೆ ನೀಡಬೇಕು. ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಕಲ್ಪಿಸುವ ದೃಷ್ಟಿಯಿಂದಲೂ ದರ್ಶನ್ ಧ್ರುವನಾರಾಯಣ್ ಅವರಿಗೆ ಅವಕಾಶ ಕಲ್ಪಿಸಿದರೆ ಪಕ್ಷಕ್ಕೂ, ಕ್ಷೇತ್ರದ ಜನತೆಗೂ ಅನುಕೂಲವಾಗಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿ.ಆರ್.ಧ್ರುವನಾರಾಯಣ್ ಅವರ ಕುಟುಂಬಕ್ಕೆ ರಾಜಕೀಯವಾಗಿ ಮನ್ನಣೆ ನೀಡಬೇಕಿದೆ” ಎಂದು ಮಂಜು ಶಂಕರಪುರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ತಾಲ್ಲೂಕು ಸಂಚಾಲಕರಾದ ನಟರಾಜು, ಸಂಘಟನಾ ಸಂಚಾಲಕರಾದ ಸುರೇಶ್ ಸಿದ್ದೇಗೌಡನಹುಂಡಿ, ಹೊಳೆಯಪ್ಪ, ಸಿದ್ದರಾಜು , ಶಿವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.