ನಂಜನಗೂಡು: ತೆಂಗಿನ ಗರಿಯೇ ಇವರಿಗೆ ಮೇಲ್ಚಾವಣಿ, ಕುಸಿದು ಬಿದ್ದಿರುವ ಮನೆ, ಬಿರುಕು ಬಿಟ್ಟ ಮಣ್ಣಿನ ಗೋಡೆಗಳು, ರಕ್ಷಣೆಗೆ ಮನೆ ಮೇಲೆ ಪ್ಲಾಸ್ಟಿಕ್ ಟಾರ್ಪಲ್ ಆಸರೆ, ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವ ಬದುಕುತ್ತಿರುವ ಕುಟುಂಬಸ್ಥರ ಗೋಳು ಕೇಳುವವರೇ ಇಲ್ಲ.

ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗುಡಿಸಲು ಮುಕ್ತ ರಾಜ್ಯದ ಕನಸು ಕನಸಾಗಿಯೇ ಉಳಿದಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬ್ಯಾಳಾರಹುಂಡಿ ಗ್ರಾಮದಲ್ಲಿ ಎರಡು ಕುಟುಂಬಗಳು ಬೀದಿಗೆ ಬಿದ್ದಿವೆ. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರು ಗುಡಿಸಿಲಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಗ್ರಾಮದ ಸಿದ್ದಮ್ಮ ಎಂಬ ವೃದ್ಧೆ ವಾಸಿಸುವ ಮನೆಯೂ ಕಳೆದ 20 ವರ್ಷಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ. ಇತ್ತ ಪರಿಹಾರವೂ ಇಲ್ಲ, ಮನೆಯೂ ಇಲ್ಲದೆ ಕುಟುಂಬವು ಕಂಗಾಲಾಗಿದೆ. ವೃದ್ಧೆಯೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಗ್ರಾಮದ ನಾಗರಾಜೇಗೌಡ ಎಂಬುವವರೆಗೂ ವಾಸಿಸಲು ಸೂರಿಲ್ಲದೆ ಪರದಾಡುತ್ತಿದ್ದಾರೆ. ನಮಗೆ ಮನೆಯನ್ನು ಮಂಜೂರು ಮಾಡಿಕೊಡಿ ಎಂದು ನವಿಲೂರು ಗ್ರಾಮ ಪಂಚಾಯಿತಿಗೆ ಎಷ್ಟೇ ಮನವಿ ಮಾಡಿದ್ರು, ಮನೆ ನೀಡಿಲ್ಲ.
ನಮಗೆ ಮನೆ ಕೊಡಿ ಇಲ್ಲ, ಒಂದು ತೊಟ್ಟು ವಿಷ ಕೊಟ್ಟು ಬಿಡಿ ನಾವು ಪ್ರಾಣ ಬಿಡುತ್ತೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ನಾವು ವೋಟ್ ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಸೂರು ಕಲ್ಪಿಸುವವರೇ ಕಾದು ನೋಡಬೇಕಿದೆ.

