ನಂಜನಗೂಡು: ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಾ ಬಂದಿದ್ದರು ಬಡವರ ಮನೆಗಳು ಇನ್ನೂ ಸೂರು ಕಂಡಿಲ್ಲ. ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ನನಸಾಗಲೇ ಇಲ್ಲ.

ಹೌದು.. ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದ ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದ ದುಂಡಮ್ಮ ಮತ್ತು ಶಿವಣ್ಣ ಎಂಬುವವರು ಕಳೆದ 35 ವರ್ಷಗಳಿಂದ ತೆಂಗಿನ ಗರಿಯ ಗುಡಿಸಲು ಮನೆಯಲ್ಲೇ ವಾಸ ಮಾಡುತ್ತಿದ್ದು, ಸರ್ಕಾರದಿಂದ ಸಿಗುವ ಸೌಲಭ್ಯಗಳು ಮರೀಚಿಕೆಯಾಗಿವೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜೋತಿ ಯೋಜನೆ ಇವರಿಗೆ ತಲುಪಿಲ್ಲ.

ವಿದ್ಯುತ್ ಇಲ್ಲದೆ ಮೇಣದಬತ್ತಿಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಸೋರುತ್ತದೆ. ಮೂರು ದಶಕಗಳು ಕಳೆದರೂ ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾತಿ ನೀಡಿಲ್ಲ. ಮಕ್ಕಳು ಮೊಮ್ಮಕ್ಕಳು ಮನೆಗೆ ಬಂದರೆ ಮಲಗಲು ಜಾಗವಿಲ್ಲ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದೇವೆ. ಆದರೆ, ಗುಡಿಸಲಿನ ತವರು ಮನೆಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಒಂದು ದಿನ ಕೆಲಸಕ್ಕೆ ಹೋಗಲಿಲ್ಲ ಎಂದರೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ. ಒಂದು ವಾರಗಳ ಕಾಲ ಮಳೆ ಬಂದರೆ ಇನ್ನೊಬ್ಬರ ಮನೆಗೆ ಹೋಗಿ ಮಲಗುತ್ತೇವೆ. ಇನ್ನೆಷ್ಟು ದಿನ ಅಂತ ಬೇರೆಯವರ ಮನೆಯಲ್ಲಿ ಮಲಗಳು ಜಾಗ ಕೊಡ್ತಾರೆ.

ನಮಗೆ ಆಸ್ತಿ, ಅಂತಸ್ತು ಬೇಡ ಸಾರ್ ಒಂದು ಮನೆ ಕೊಡಿ ಎಂದು ಕುಟುಂಬಸ್ಥರು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ, ಸೂರು ಕಲ್ಪಿಸುವವರೇ ಕಾದು ನೋಡಬೇಕಿದೆ.