ಮೈಸೂರು: ಕೇರಳ ಮೂಲದ ವ್ಯಕ್ತಿಯೊಬ್ಬ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಭೋಗೇಶ್ವರ ಕಾಲೋನಿ ಗ್ರಾಮದ ಶುಂಠಿ ಜಮೀನಿನಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಕೇರಳ ರಾಜ್ಯದ ಗೂಡ್ಲೂರು ತಾಲ್ಲೂಕಿನ ಮಡುವನ್ ತೆರವಂಬ ಗ್ರಾಮದ ಮುಕುಂದನ್ ಆರ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ತಾಲ್ಲೂಕಿನ ಭೋಗೇಶ್ವರ ಕಾಲೋನಿ ಗ್ರಾಮದಲ್ಲಿ ಕಳೆದ ಎಳೆಂಟು ವರ್ಷದಿಂದ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆ ಬೆಳೆದು ಜಮೀನಿನಲ್ಲಿ ವಾಸ ಮಾಡುತ್ತಿದ್ದ ಎನ್ನಲಾಗಿದೆ.

ಶುಕ್ರವಾರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಕೇರಳದಲ್ಲಿ ಇರುವ ತನ್ನ ತಾಯಿಗೆ ಪೋನ್ ಮಾಡಿ ನಾನು ಇಲ್ಲಿ ಇರಲು ಸಾಧ್ಯ ಆಗುತ್ತಿಲ್ಲಾ ಹಾಗಾಗಿ ಅಣ್ಣನನ್ನು ಕಳಿಸಿ ನಾನು ವಾಪಸ್ಸು ಊರಿಗೆ ಬರುತ್ತೇನೆ ಎಂದು ಹೇಳಿದ್ದಾನೆ. ನಾಳೆ ಬೆಳಿಗ್ಗೆ ಅಣ್ಣನನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ.

ಶನಿವಾರ ಕೇರಳ ಮೂಲದ ರವಿ ಮತ್ತು ಬಾಬು ಜೊತೆಗೆ ಶುಂಠಿ ಜಮೀನಿನಲ್ಲಿ ಕೆಲಸ ಮಾಡಿ ನಂತರ ಶೆಡ್ ಗೆ ಒಬ್ಬನೇ ಬಂದಿದ್ದಾನೆ. ನಂತರ 12 ಗಂಟೆ ಸಮಯದಲ್ಲಿ ಶೆಡ್ ನಿಂದ ವ್ಯಕ್ತಿ ಕಿರುಚಿಕೊಂಡ ಶಬ್ದ ಕೇಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರವಿ ಮತ್ತು ಬಾಬು ಬಂದು ನೋಡಿದಾಗ ಹರಿತವಾದ ಚಾಕುವಿನಿಂದ ವ್ಯಕ್ತಿ ಕತ್ತು ಕುಯ್ದುಕೊಂಡು ನರಳಾಡುತ್ತಿದ್ದನ್ನು ನೋಡಿ ಭಯಗೊಂಡು ಜೊತೆಯಲ್ಲಿ ಇದ್ದ ವ್ಯಕ್ತಿಗಳು ಮೃತ ಅಣ್ಣನಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿ ನಂತರ ಗ್ರಾಮಸ್ಥರ ಸಹಕಾರದಲ್ಲಿ ಜೀಪ್ ನಲ್ಲಿ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿ ಆಗದೆ ವ್ಯಕ್ತಿ ಮೃತಪಟ್ಟಿದ್ದಾನೆ.

ಆಸ್ಪತ್ರೆಗೆ ಬಂದ ಮೃತ ವ್ಯಕ್ತಿಯ ಅಣ್ಣ ಮಣಿಕಂಠ ನನ್ನ ತಮ್ಮ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಹಾಗಾಗಿ ಆತನೆ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ದೂರು ಪಡೆದ ಎಚ್.ಡಿ.ಕೋಟೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಚಿಕ್ಕನಾಯಕ ಪ್ರಕರಣ ದಾಖಲು ಮಾಡಿಕೊಂಡು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.