ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ವಿಶ್ವ ವಿಖ್ಯಾತ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ಗೌತಮ ಪಂಚ ಮಹಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆ 5.50ರಿಂದ 6.30ರೊಳಗೆ ಸಲುವ ಶುಭ ಮೀನ ಲಗ್ನದಲ್ಲಿ ಗೌತಮ ಪಂಚ ಮಹಾರಥೋತ್ಸವಕ್ಕೆ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳ ಬಳಿಕ ರಥೋತ್ಸವ ಚಾಲನೆ ದೊರೆಯಿತು. ನಂಜನಗೂಡಿನ ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ ಡಾ.ಲಕ್ಷ್ಮಿಕಾಂತರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ತಹಶೀಲ್ದಾರ್ ಡಾ.ಸ್ಮಿತಾ ರಾಮು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ನಗರಸಭಾ ಆಯುಕ್ತ ಬಸವರಾಜ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜು ವೃತ್ತ ನಿರೀಕ್ಷಕ ರವೀಂದ್ರ, ದೇವಸ್ಥಾನದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಸೇರಿದಂತೆ ಗಣ್ಯರು ರಥಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಮುಂಭಾಗದಲ್ಲಿ ಹೊರಟು ರಥದ ಬೀದಿಯಲ್ಲಿ ಸಾಗಿದ ಶ್ರೀ ನಂಜುಂಡೇಶ್ವರ ಸ್ವಾಮಿ, ಪಾರ್ವತಮ್ಮ, ಗಣಪತಿ, ಸುಬ್ರಮಣ್ಯ, ಚಂಡಿಕೇಶ್ವರ ರಥಗಳನ್ನು ಭಕ್ತಿ ಭಾವದಿಂದ ಭಕ್ತರು ಎಳೆದರು. ಅದ್ದೂರಿ ರಥೋತ್ಸವ ಕಣ್ತುಂಬಿಕೊಳ್ಳಲು ಮಧ್ಯರಾತ್ರಿಯಿಂದಲ್ಲೇ ಭಕ್ತ ಸಾಗರ ಹರಿದು ಬಂದಿತ್ತು. ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥ ಎಳೆಯುವಾಗ,ಭಕ್ತರ ಪರಾಕಾಷ್ಠೆ ಮುಗಿಲು ಮುಟ್ಟಿತ್ತು.
ಶ್ರೀ ಅಮ್ಮನವರ ರಥ, ಗಣಪತಿ ರಥ, ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಸರತಿ ಸಾಲಿನಲ್ಲಿ ಸಾಗಿದವು. ವಿಶಿಷ್ಟ ಕುಸರಿ ಕಲಾ ಕೆತ್ತನೆಯಿಂದ ಕೂಡಿರುವ ರಥವನ್ನು ನಾನಾ ಬಣ್ಣಗಳ ವಸ್ತ್ರಗಳು, ವಿವಿಧ ಬಗೆಯ ಪುಷ್ಪ ಹಾಗೂ ಬಣ್ಣದ ಧ್ವಜಗಳನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಭಕ್ತಾದಿಗಳು ನಂಜುಂಡೇಶ್ವರನಿಗೆ ಜಯ ಘೋಷ ಮೊಳಗಿಸಿ ರಥವನ್ನು ಎಳೆದು ಪುನೀತರಾದರು. ಭಕ್ತರು ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವವನ್ನು ಮೆರೆದರು.
ದೊಡ್ಡ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಸುವ್ಯವಸ್ಥಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಾರಿಗೆಯ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯವರು ನಂಜನಗೂಡಿಗೆ ಜಾತ್ರೆಯ ದಿನ ಹೆಚ್ಚುವರಿಯಾಗಿ 3 ವಿಶೇಷ ರೈಲು ಸಂಚಾರದ ಸೌಕರ್ಯ ಕಲ್ಪಿಸಿದ್ದಾರೆ. ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಬೇಸಿಗೆ ಆರಂಭದಲ್ಲಿಯೇ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕದಳದವನ್ನು ನಿಯೋಜಿಸಲಾಗಿತ್ತು. ರಥ ಪ್ರದಕ್ಷಿಣೆ ಹಾಕುವ ಮಾರ್ಗಗಳ ಮಧ್ಯೆ ,ಹೆಲ್ತ್ ಕ್ಯಾಂಪ್ ಕೂಡ ತೆರೆಯಲಾಗಿತ್ತು. ಅಪಾರ ಜನಸ್ತೋಮ ನಿಯಂತ್ರಿಸಲು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ದೊಡ್ಡ ಜಾತ್ರೆಯ ದೃಶ್ಯಗಳನ್ನು ಖಾಸಗಿ ಡ್ರೋಣ್ ಬಳಸಿ ಚಿತ್ರಕರಣ ಮಾಡಲು ನಿಷೇಧಿಸಲಾಗಿತ್ತು. ಆದರೂ 8 ಡ್ರೋನ್ ಕ್ಯಾಮೆರಾಗಳು ಕಾಣಿಸಿಕೊಂಡಿವೆ. ಜಾತ್ರೆಯ ಅಂಗವಾಗಿ ದೇವಾಲಯದ ಆವರಣದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಪ್ರದರ್ಶನಗೊಂಡವು. ಸ್ಥಳೀಯ ಜಾನಪದ ಕಲಾವಿದರಿಂದ ಭಕ್ತಿಗೀತೆಗಳನ್ನು ಹಾಡಿ ನೆರೆದಿದ್ದ ಜನರನ್ನು ರಂಜಿಸಿದರು.

