ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ಚಿಕ್ಕ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 22ರಿಂದ 27ರವರೆಗೆ ಆರು ದಿನಗಳ ಕಾಲ ಶ್ರೀ ನಂಜುಂಡೇಶ್ವರ ಸ್ವಾಮಿಯವರ ಚಿಕ್ಕ ಜಾತ್ರಾ ಮಹೋತ್ಸವ ನಡೆಯಲಿದೆ. ನವೆಂಬರ್ 25ರಂದು ಮೂರು ರಥಗಳ ಮಹಾರಥೋತ್ಸವ ಹಾಗೂ 27ರಂದು ಕಪಿಲಾ ನದಿಯಲ್ಲಿ ತೆಪ್ಪೋತ್ಸವ ಜರುಗಲಿದೆ.

ಆದರೆ, ಜಾತ್ರೆಯ ಸಂಭ್ರಮದ ನಡುವೆಯೂ ಭಕ್ತರನ್ನು ಕಾಡುತ್ತಿರುವುದು ಗೌರಿ ಆನೆಯ ಗೈರು. ಒಂದು ಕಾಲದಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ಗೌರಿ ಆನೆ ಕಳೆದ ಎಂಟು ವರ್ಷಗಳಿಂದ ಜಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಗೌರಿಯ ಗಜಗಾಂಭೀರ್ಯದ ನಡಿಗೆ ನೋಡಲು ಕಾಯುತ್ತಿದ್ದ ಭಕ್ತರಿಗೆ ಈಗ ನೆನಪುಗಳೇ ಆಸರೆಯಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ. ಕೃಷ್ಣ, ಕೆಜಿಎಫ್ ಆನೆ ಶಿಬಿರದಲ್ಲಿರುವ ಗೌರಿಯನ್ನು ಮರಳಿ ದೇವಸ್ಥಾನಕ್ಕೆ ಕರೆತರಲು ಶಾಸಕ ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಚರ್ಚಿಸಿದ್ದು, ಮುಂದಿನ ದೊಡ್ಡ ಜಾತ್ರೆಯೊಳಗೆ ಆನೆಯನ್ನು ಕರೆತರುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.