ನಂಜನಗೂಡು: ಯುದ್ಧದ ಎಫೆಕ್ಟ್ ದಕ್ಷಿಣ ಕಾಶಿ ನಂಜನಗೂಡಿಗೂ ತಟ್ಟಿದ್ದು, ಗೃಹ ಉಪಯೋಗಿ ಗ್ಯಾಸ್ ಸಿಲಿಂಡರ್ ಗಾಗಿ ಗ್ರಾಹಕರು ಪರದಾಡುತ್ತಿದ್ದಾರೆ. ನಂಜನಗೂಡಿನ ಶ್ರೀ ಚೌಡೇಶ್ವರಿ ಇಂಡಿಯನ್ ಗ್ಯಾಸ್ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂಜನಗೂಡಿನ ಮಹದೇಶ್ವರ ಲೇಔಟ್ ಮುಂಭಾಗದಲ್ಲಿ ಮುಂಜಾನೆಯಿಂದಲೇ ಜಮಾಯಿಸಿರುವ ಗ್ರಾಹಕರು ತಮ್ಮ ಸಿಲಿಂಡರ್ ಗ್ಯಾಸ್ ಗಾಗಿ ಸಂಜೆ ತನಕ ಕಾದು ಕುಳಿತರೂ ಗ್ಯಾಸ್ ಮಾತ್ರ ಬರಲಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕಳೆದ 15 ದಿನಗಳ ಹಿಂದೆಯೇ ಗ್ಯಾಸ್ ಬುಕಿಂಗ್ ಮಾಡಿದ್ದೇವೆ. ಬೆಳಿಗ್ಗೆ ಬನ್ನಿ ಸಂಜೆ ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ.
ನಮ್ಮಲ್ಲಿ ಅದೆಷ್ಟೋ ಜನರಿಗೆ ಗ್ಯಾಸ್ ಬುಕಿಂಗ್ ಮಾಡದೆ ಇದ್ದರೂ ಬುಕಿಂಗ್ ಆಗಿದೆ ಮತ್ತು ಡೆಲಿವರಿ ಮಾಡಲಾಗಿದೆ ಎಂದು ಮೊಬೈಲಿಗೆ ಮೆಸೇಜ್ ಬಂದಿದೆ. ಇದರಿಂದ ನಮಗೆ ಬರುವ ಸಿಲಿಂಡರ್ ಗ್ಯಾಸ್ ಅನ್ನು ಬೇರೆಡೆ ಮಾರಾಟ ಮಾಡುತ್ತಿರುವ ಬಗ್ಗೆ ನಮಗೆ ಅನುಮಾನ ವ್ಯಕ್ತವಾಗುತ್ತಿದೆ. ಕೂಡಲೇ ಗ್ರಾಹಕರಿಗೆ ಸಿಲಿಂಡರ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಶ್ರೀ ಚೌಡೇಶ್ವರಿ ಇಂಡಿಯನ್ ಗ್ಯಾಸ್ ಏಜೆನ್ಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

