ಮೈಸೂರು: ಬನ್ನೂರು ರೋಟರಿ ಸಂಸ್ಥೆ ಮತ್ತು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ, ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಅವರ ತಂದೆ ಕಾನ್ ಸಿಂಗ್ ರಾಜ್ ಪುರೋಹಿತ್ ಅವರ ಸ್ಮರಣಾರ್ಥವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರಕ್ಕೆ ಮೈಸೂರು, ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಇದರ ಪ್ರಯೋಜನ ಪಡೆದರು. ಕಣ್ಣಿನ ತೊಂದರೆ ಇರುವ ರೋಗಿಗಳಿಗೆ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಿ, ಕನ್ನಡಕಗಳನ್ನು ನೀಡಲಾಗುವುದು ಸಂದರ್ಭದಲ್ಲಿ, ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಅವರು ಪ್ರತಿ ವರ್ಷವೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ರೋಗಿಗಳ ಆರೋಗ್ಯವನ್ನು ವಿಚಾರಿಸಿ, ಅವರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.‌

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಮಹೇಂದ್ರ ಸಿಂಗ್ ಕಾಳಪ್ಪ, ಕಳೆದ 17 ವರ್ಷಗಳಿಂದ ತಮ್ಮ ತಂದೆಯ ನೆನಪಿಗಾಗಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಬಡವರ ಬಾಳಿಗೆ ಬೆಳಕಾಗುವುದು ಇದರ ಮುಖ್ಯ ಉದ್ದೇಶವಾಗಿದ್ದು, ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಈ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಗೌರಿ ದೇವಿ, ರಾಜೇಶ್, ಲಕ್ಷ್ಮಣ್ ರಾಮ್, ಅರವಿಂದ ಕಣ್ಣಿನ ಆಸ್ಪತ್ರೆಯ ಪಿಆರ್‌ಒ ವಿಜಯ್, ಡಾ. ಚಂದ್ರವದನ್, ಡಾ. ಶಾಹಿ ತೇಜಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.