ಮೈಸೂರು: ರೆಸಾರ್ಟ್ ಗೆ ನುಗ್ಗಿ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಬೈಕ್ ಕಿತ್ತುಕೊಂಡು ಪರಾರಿ ಆಗಿದ್ದ ನಾಲ್ವರನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರು ನಗರದ ವೀಲ್ ವಾಸಿಂ, ಶೋಯೆಬ್, ಅಜರ್ ಹಾಗೂ ತಾಲೂಕಿನ ಕೊಳವಿಗೆಯ ಶ್ರೀಕಾಂತ್ ಅಲಿಯಾಸ್ ಸಿರಿ ಬಂಧಿತ ಆರೋಪಿಗಳು.ಮೈಸೂರಿನ ಅಸ್ಲಂ ಎಂಬಾತ ತನ್ನ ಪ್ರೇಯಸಿಯೊಂದಿಗೆ ಹುಣಸೂರಿನ ರೆಸಾರ್ಟ್ ಗೆ ಬಂದಿದ್ದ ವೇಳೆ ವೀಲ್ ವಾಸಿಂ ಮತ್ತವರ ಸ್ನೇಹಿತರು ಗಲಾಟೆ ನಡೆಸಿದ್ದಲ್ಲದೆ ಅಸ್ಲಂನ ಬೈಕ್ನ್ನು ಕಿತ್ತುಕೊಂಡು ಬೆದರಿಕೆ ಹಾಕಿ ಪರಾರಿಯಾಗಿದ್ದರು. ಬೈಕನ್ನು ಕೊಳವಿಗೆಯ ಶ್ರೀಕಾಂತ್ ಬಳಿ ಅಡವಿಟ್ಟು 30ಸಾವಿರ ರೂ ಪಡೆದುಕೊಂಡಿದ್ದರು.ಈ ಸಂಬಂಧ ಅಸ್ಲಂ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿ ವೀಲ್ ವಾಸಿಂ ಮೇಲೆ ಸಾಕಷ್ಟು ಪ್ರಕರಣಗಳಿರುವುದನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಯಾಚರಣೆಗಿಳಿದ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೈಕ್ ಅಡವಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಗಂಭೀರ ಹಲ್ಲೆ ನಡೆಸಿದ್ದನ್ನು ಪರಿಗಣಿಸಿ, ನಾಲ್ವರು ಆರೋಪಿಗಳ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

