ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾದಸ್ವರದ ಮೂಲಕ ದೇವಾಲಯದ ಆಡಳಿತ ಮಂಡಳಿ ಮತ್ತು ತಾಲ್ಲೂಕು ಆಡಳಿತ ಹೂಗೊಚ್ಚ ನೀಡಿ ಸ್ವಾಗತಿಸಿದರು.

ಇಂದು ಬೆಳ್ಳಂಬೆಳ್ಳಗ್ಗೆ ದೇವಾಲಯಕ್ಕೆ ಭೇಟಿ ನೀಡಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂಜುಂಡೇಶ್ವರನ ದೇವಾಲಯ ದಕ್ಷಿಣ ಭಾರತದಲ್ಲಿಯೇ ಅತ್ಯಂತ ಪುರಾತನ ಕಾಲದ್ದು, ದೇಶಾದ್ಯಂತ ಸಾಕಷ್ಟು ಭಕ್ತ ಸಮೂಹ ನಂಜುಂಡೇಶ್ವರನ ಸನ್ನಿಧಿಗೆ ಆಗಮಿಸುತ್ತದೆ. ಇಲ್ಲಿ ಅಭಿವೃದ್ಧಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ. ನಿರ್ವಹಣೆಯ ವ್ಯವಸ್ಥೆಯಿಂದ ದೇವಾಲಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಾಲಯದ ಸನ್ನಿಧಿಯಲ್ಲಿ ರಾಜಕೀಯ ಮಾತನಾಡಬಾರದು. ನಂಜುಂಡೇಶ್ವರನ ದರ್ಶನ ಮಾಡಲು ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಗಣಪತಿ ಪಾರ್ವತಿ ಅಮ್ಮ ಮತ್ತು ಕಾಲಭೈರವೇಶ್ವರ ದರ್ಶನ ಪಡೆದು ಪುನೀತರಾಗಿದ್ದೇನೆ. ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಹಿನ್ನೆಲೆ ನಂಜುಂಡೇಶ್ವರನ ಸನ್ನಿಧಿಗೆ ಭೇಟಿ ನೀಡಿ ತೃಪ್ತಿಕರವಾಗಿದೆ‌ ಎಂದರು‌.

ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿಯ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಮೈಸೂರಿನತ್ತ ತೆರಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜೆಗೌಡ, ಮಾಜಿ ಶಾಸಕ ಅನ್ನದಾನಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಜೆಡಿಎಸ್ ಪಕ್ಷದ ಮುಖಂಡರಾದ ನರಸಿಂಹ ಮೂರ್ತಿ, ಮಹದೇವಸ್ವಾಮಿ, ಸಂಜಯ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.