ನಂಜನಗೂಡು: ಸ್ಮಶಾನ ಜಾಗ ಸರ್ವೆ ಮಾಡಲು ಬಂದ ಅಧಿಕಾರಿಗಳ ಮುಂದೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸ್ಥಳೀಯರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ ಘಟನೆ ನಂಜನಗೂಡು ತಾಲ್ಲೂಕು ಚಿಕ್ಕಕವಲಂದೆ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕ ಕವಲಂದೆ ಗ್ರಾಮದ ಮಹೇಂದ್ರ ಹಾಗೂ ಸುಬ್ರಹ್ಮಣ್ಯ ವಿರುದ್ದ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ನಂಜನಾಯಕ, ಸಿದ್ದರಾಜು ದೊಡ್ಡಕವಲಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚಿಕ್ಕಕವಲಂದೆ ಗ್ರಾಮದಲ್ಲಿ ನಾಯಕ ಜನಾಂಗದವರಿಗಾಗಿ 0.14 ಗುಂಟೆ ಜಮೀನು ಸ್ಮಶಾನಕ್ಕಾಗಿ ಮಂಜೂರಾಗಿದೆ. ಜಾಗದ ಸರ್ವೆ ಮಾಡಿ ಹದ್ದುಬಸ್ತು ಮಾಡಿಕೊಡುವಂತೆ ಸ್ಥಳೀಯ ನಾಯಕ ಜನಾಂಗದವರು ಅರ್ಜಿ ಸಲ್ಲಿಸಿದ್ದಾರೆ.ಈ ಹಿನ್ನಲೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಹೆನ್ರಿ ಡಿಸೋಜಾ , ಗ್ರಾಮ ಲೆಕ್ಕಾಧಿಕಾರಿ ಮೊನಿಕಾ ಹಾಗೂ ತಾಲ್ಲೂಕು ಸರ್ವೆಯರ್ ಜ್ಞಾನ ಸುಂದರ್ ಬಂದಿದ್ದಾರೆ.

ಸರ್ವೆಗೆ ಮುಂದಾದ ವೇಳೆ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹೇಂದ್ರ ಹಾಗೂ ಸುಬ್ರಹ್ಮಣ್ಯ ಅಡ್ಡಿಪಡಿಸಿದ್ದಾರೆ. ಈ ವೇಳೆ ಅಧಿಕಾರಿಗಳ ಮುಂದೆ ಮಹೇಂದ್ರ ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಸೌದೆಯಿಂದ ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ನಂತರ ಕಲ್ಲಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಗಲಾಟೆ ನಡೆದ ಹಿನ್ನಲೆ ಸರ್ವೆಗೆ ಬಂದ ಅಧಿಕಾರಿಗಳು ವಾಪಸ್ ಹಿಂದಿರುಗಿದ್ದಾರೆ. ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಲ್ಲೆಗೊಳಗಾದ ನಂಜನಾಯಕ, ಸಿದ್ದರಾಜು ಮಹೇಂದ್ರ ಹಾಗೂ ಸುಬ್ರಹ್ಮಣ್ಯ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲು ಮಾಡಿಕೊಂಡು ನ್ಯಾಯ ಕೊಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.