ನಂಜನಗೂಡು: ಶಾಲಾ ಮಕ್ಕಳನ್ನು ಬಣ್ಣದಲ್ಲಿ ಅರಳಿದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಕೈ ಬಿಸಿ ಕರೆಯುತ್ತಿವೆ. ಶಿಕ್ಷಕರು ಮತ್ತು ಅರಣ್ಯ ಸಿಬ್ಬಂದಿಗಳ ಕಾರ್ಯವೈಕರಿಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಹೌದು.. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಹಾರೋಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಡೀ ಶಾಲೆಯ ಗೋಡೆಗಳಲ್ಲಿ ಕಾಡಿನ ಚಿತ್ರಗಳು ಹಾಗೂ ವನ್ಯಜೀವ ಸಂಕುಲಗಳ ಚಿತ್ರಗಳನ್ನು ಅರಳಿದ್ದು, ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.

ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಿಸಲು ಹಿನ್ನೆಲೆ ಹುಲಿ, ಸಿಂಹ, ಚಿರತೆ, ನವಿಲು, ಆನೆ, ಒಂಟೆ, ಜಿರಾಫೆ ಸೇರಿದಂತೆ ಸ್ಥಳೀಯ ಹಾಗೂ ಹೊರದೇಶದ ಪಕ್ಷಿಗಳ ಚಿತ್ರಗಳನ್ನು ಅಂದವಾಗಿ ರಚಿಸಿದೆ. ಅಲ್ಲದೆ, ಜಲಚರಗಳು ಸೇರಿದಂತೆ ಎಲ್ಲಾ ಬಗೆಯ ಮರಗಳ ಚಿತ್ರಗಳು ಒಳಗೊಂಡಿದ್ದು, ಶಾಲೆಯು ಪ್ರತಿಯೊಬ್ಬರ ಗಮನ ಸೆಳೆಯುವಂತೆ ಕಂಗೊಳಿಸುತ್ತಿದೆ.

ಅದರೊಂದಿಗೆ ಅನೇಕ ಘೋಷವಾಕ್ಯವನ್ನು ಬರೆಯಲಾಗಿದೆ. ಶಾಲೆಯ ಸುತ್ತಮುತ್ತಲು ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ. ಅದಲ್ಲದೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯ ಗೋಡೆಗಳ ಮೇಲೆ ಪ್ರಕೃತಿ ಚಿತ್ತಾರ ಬಿಡಿಸಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ಅರಣ್ಯ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಜು ಅವರು ಶಾಲೆಗೆ ದೇಣಿಗೆ ನೀಡಿದ್ದಾರೆ. ಅದರ ಸವಿನೆನಪಿಗಾಗಿ ಶಾಲಾ ಕಟ್ಟಡಗಳಿಗೆ ಅರಣ್ಯದ ಚಿತ್ರಗಳನ್ನು ರಚಿಲಾಗಿದೆ. ಪರಿಸರ ಸಂರಕ್ಷಣೆಯೇ ಇದರ ಪ್ರಮುಖ ಉದ್ದೇಶವಾಗಿದೆ.

