ಮೈಸೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮ ಇಮ್ಮಡಿಗೊಳಿಸಿ, ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ.
ಅರಮನೆ ಆಡಳಿತ ಮಂಡಳಿ 10 ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ, ಬೊಂಬೆ ಪ್ರದರ್ಶನಕ್ಕೆ ಸಾರೋಟಿನಲ್ಲಿ ವಿರಾಜಮಾನಗಳಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಟೇಪ್ ಕತ್ತರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.
ಬಳಿಕ ಅಕ್ಷರಧಾಮ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಪುಷ್ಪಾರ್ಚನೆ ಮಾಡಿದರು. ವಿವಿಧ ಜಾನಪದ ಕಲಾತಂಡಗಳು, ವಾದ್ಯವೃಂದ, ಅರಮನೆಯ ಆನೆಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ವಾರಾಂತ್ಯವಾದ್ದರಿಂದ ಮೊದಲ ದಿನವೇ ಸಾವಿರಾರು ಜನರು ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.
ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ನವದೆಹಲಿಯ ಅಕ್ಷರಧಾಮ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 50 ಅಡಿ ಅಗಲ, 16 ಅಡಿ ಉದ್ದ, 25 ಅಡಿ ಎತ್ತರದಲ್ಲಿ ಲಕ್ಷಾಂತರ ಹೂಗಳಿಂದ ಅಕ್ಷರಧಾಮ ಮಾದರಿ ನಿರ್ಮಿಸಲಾಗಿದೆ. ಗುಲಾಬಿ, ಸೇವಂತಿಗೆ ಸೇರಿದಂತೆ ಲಕ್ಷಾಂತರ ಹೂಗಳಿಂದ ವಿಶಿಷ್ಟವಾಗಿ ನಿರ್ಮಿಸಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಇದರ ಜತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್, ನಂಜನಗೂಡಿನ ನಂಜುಡೇಶ್ವರ ದೇವಸ್ಥಾನ ಪ್ರಮುಖ ಆಕರ್ಷಣೆಯಾಗಿದೆ.

ಗಮನ ಸೆಳೆಯುವ ವಿವಿಧ ಮಾದರಿಗಳು: ಫಲಪುಷ್ಪ ಪ್ರದರ್ಶನದಲ್ಲಿ ಪಂಚಗ್ಯಾರಂಟಿಗಳು ಆಕರ್ಷಿಸುತ್ತಿವೆ. ವಿವಿಧ ಬಗೆಯ ಹೂಗಳಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಮಾದರಿ ನಿರ್ಮಿಸಲಾಗಿದೆ. ಜತೆಗೆ ಹದ್ದು, ಮರಿಯಾನೆ, ಸೆಲ್ಪೀ ಪಾಯಿಂಟ್, ರಾಜವಂಶದ ಲಾಂಛನವಾದ ಗಂಡಭೇರುಂಡ, ಆಮೆ, ಮಕ್ಕಳ ಆಷರ್ಕಣೆಗೆ ಬಂಡೀಪುರ ಅಭಯಾರಣ್ಯದ ೬ ಪ್ರಾಣಿ, ೪ ಪಕ್ಷಿಗಳ ಮಾದರಿ, ಮಾವಿನ ಹಣ್ಣಿನ ಮಾದರಿ, ಕಾರ್ಗಿಲ್ ಯುದ್ಧ ಸ್ಮಾರಕ, ಹ್ಯಾಟ್, ಸಂವಿಧಾನದ ಪೀಠಿಕೆಯ ಮಾದರಿ ಪ್ರಮುಖ ಆಕರ್ಷಣೆಯಾಗಿದೆ. ಜತೆಗೆ ಪ್ರವೇಶ ದ್ವಾರಗಳಲ್ಲಿ ೨ ನವಿಲಿನ ಮಾದರಿ ನಿರ್ಮಿಸಿ ಬೊಂಬೆ ಮನೆಯ ಪ್ರವೇಶ ದ್ವಾರವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿದೆ.
ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿಸಲು ವಿವಿಧ ಆಕೃತಿಗಳ ತಾಜಾತನ ಕಾಪಾಡಲು ಒಂದು ಬಾರಿ ಹೂವು, ತರಕಾರಿಗಳನ್ನು ಬದಲಾಯಿಸಲಾಗುತ್ತದೆ. ಅರಮನೆ ವರಹಾ ಉದ್ಯಾನದಲ್ಲಿರುವ ವರ್ಟಿಕಲ್ ಗಾರ್ಡನ್‌ನಲ್ಲಿ ಸುಮಾರು 25ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳನ್ನು ಜೋಡಣೆ ಮಾಡಲಾಗಿದೆ. ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಕೋಲಿಯಸ್, ಸಿಲೋಷಿಯ, ಕಾಶಿಗೊಂಡೆ, ಆಸ್ಟರ್ ಸೇರಿದಂತೆ ೩೫ ಜಾತಿಯ ಹೂವಿನ ಗಿಡಗಳು, ಗುಲಾಬಿ, ಕ್ರೈಸಾಂಥಿಮಂ, ಪಿಂಗ್ ಪಾಂಗ್, ಕಾರ್ನೆಷಲ್, ಅಸ್ಟ್ರಮೇರಿಯ, ಜರ್ಬೆರಾ ಸೇರಿದಂತೆ ಅಂದಾಜು ೬ ಲಕ್ಷ ಹೂಗಳಿಂದ ವೈವಿಧ್ಯಮಯ ಅಲಂಕಾರ ಮಾಡಲಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ೫೦೦ ಜನ ಗಣ್ಯರಿಗೆ, ಸಾರ್ವಜನಿಕರಿಗೆ ಸಾಂಕೇತಿಕವಾಗಿ ಔಷಧಿಯುಕ್ತ ಗಿಡಗಳಾದ ಅಲೋವೆರ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಚಕ್ರಮುನಿ ಗಿಡಗಳನ ವಿತರಿಸಲಾಯಿತು. ವೀಕ್ಷಣೆ ಸಮಯದಲ್ಲಿ ಜಯ ಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳು ಸೇರಿದಂತೆ ಶಾಸ್ತ್ರೀಯ ವಾದನಗಳ ಸಂಗೀತ ಆಲಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಎಂಎಲ್ಸಿಗಳಾದ ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಅಪರ ಜಿಲ್ಲಾಧಿಕಾರಿ ಶಿವರಾಜು, ಪ್ರವಾಸೋದ್ಯಯ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.

