ಹುಣಸೂರು: ಗ್ಯಾಸ್ ಸಿಲಿಂಡರ್ ಅವಘಡದಿಂದ 5 ಮಂದಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದಿದೆ.
ಮನೆಯಲ್ಲಿದ್ದ ಇಬ್ಬರು ಸಹಾಯಕ್ಕೆ ಬಂದ ಪಕ್ಕದ ಮನೆಯ ಮೂವರಿಗೆ ಸುಟ್ಟ ಗಾಯವಾಗಿದೆ. ಹುಣಸೂರು ನಗರದ ಕಲ್ಕುಣಿಕೆಯ ಕುರ್ಜನ್ ಬೀದಿಯ ವಠಾರದಲ್ಲಿ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಐವರು ಗಾಯಗೊಂಡಿದ್ದಾರೆ.
ನಿಂಗರಾಜು ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ನಿಂಗರಾಜು ಪತ್ನಿ ಜ್ಯೋತಿ, ಪಕ್ಕದ ಮನೆಯ ರಾಣಿಯಮ್ಮ, ಶೀಲ, ನಾಗಮ್ಮಗೆ ಗಾಯವಾಗಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿಂಗರಾಜುರವರ ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ದಂಪತಿಗೆ ಬೆಂಕಿ ಸಂಪರ್ಕವಾಗಿದೆ.
ಜೋರಾದ ಶಬ್ದ ಕೇಳಿದ ಪಕ್ಕದ ಮನೆಯವರಾದ ರಾಣಿಯಮ್ಮ, ಶೀಲ, ನಾಗಮ್ಮರವರು ನೋಡಲು ಹೋಗುತ್ತಿದ್ದಂತೆ ಅವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿದೆ. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

