ಮೈಸೂರು: ಆಪ್ ಗೆ 16,500/- ರೂ ಹಾಕಿದ್ರೆ ದಿನಕ್ಕೆ 650/- ರೂ ಬಡ್ಡಿ ಬರುತ್ತದೆ ಎಂದು ನಂಬಿಸಿ ಇಡೀ ಕುಟುಂಬಕ್ಕೆ 1.81 ಲಕ್ಷ ಹಣಕ್ಕೆ ಪಂಗನಾಮ ಹಾಕಿದ ಪ್ರಕರಣ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ ಉಂಡೆನಾಮ ಹಾಕಲಾಗಿದೆ.ಬಡೆಮಕಾನ್ ನಿವಾಸಿಗಳಾದ ರೊಮಾನಾ,ಮೆಹಬೂಬ್,ಅಜ್ಮಲ್ ಹಾಗೂ ಇಮ್ರಾನ್ ವಿರುದ್ದ ವಂಚನೆ ಪ್ರಕರಣ ದಾಖಲಿಸಲಾಗಿದೆ.
HUGE ಎಂಬ ಆಪ್ ಗೆ 16,500/- ರೂ ಹಾಕಿದ್ರೆ ಪ್ರತಿದಿನ 650/- ರೂ ಬಡ್ಡಿ ಬರುತ್ತದೆ ಎಂದು ನಾಲ್ವರು ಆರೋಪಿಗಳು ನೂರ್ ಜಾನ್ ಗೆ ನಂಬಿಸಿದ್ದಾರೆ.ಮೊದಲು ನೂರ್ ಜಾನ್ ಹಾಗೂ ಇವರ ಪತಿ ಹಣ ಹೂಡಿದ್ದಾರೆ. ಒಂದು ವಾರದ ನಂತರ ಬಡ್ಡಿ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ನಂಬಿಸಿದ್ದಾರೆ.
ಹಣ ಹೂಡಿಕೆ ಮಾಡಿಸಿದ್ರೆ ಕಮೀಷನ್ ಸಹ ಬರುತ್ತದೆ ಎಂದು ನಂಬಿಸಿದ್ದಾರೆ.ಇದನ್ನ ನಂಬಿದ ನೂರ್ ಜಾನ್ ತನ್ನ ಕುಟುಂಬಸ್ಥರು ಹಾಗೂ ಪರಿಚಯಸ್ಥರಿಂದ ಸುಮಾರು 11 ಮಂದಿಯಿಂದ 1.81 ಲಕ್ಷ. ಹಣ ಹೂಡಿಸಿದ್ದಾರೆ. ಒಂದು ವಾರದ ನಂತರ HUGE ಆಪ್ ನಿಂದ ಹಣ ಡ್ರಾ ಮಾಡಲು ಮುಂದಾದಾಗ ಆಪ್ ಓಪನ್ ಆಗಿಲ್ಲ.
ಈ ಬಗ್ಗೆ ರುಮಾನಾ ರವರನ್ನ ಪ್ರಶ್ನಿಸಿದಾಗ ಆಪ್ ಕ್ಲೋಸ್ ಆದ್ರೆ ನಾವೇನು ಮಾಡೋಕ್ಕೆ ಆಗಲ್ಲ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ. ವಂಚನೆಗೆ ಒಳಗಾದ 11 ಮಂದಿ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

