ನಂಜನಗೂಡು: ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ದಾಸನೂರು ಗ್ರಾಮದಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿತ್ತು .
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮತ್ತೊಂದು ಹೆಣ್ಣು ಚಿರತೆ ಇಂದು ಬೋನಿಗೆ ಬಿದ್ದಿದೆ. ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯೊಂದು ಕೊನೆಗೂ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ತಿಂದು ಹಾಕಿತ್ತು.
ಇದರಿಂದ ಗ್ರಾಮಸ್ಥರು ಭಯಭೀತಿಯಲ್ಲಿ ಓಡಾಡುತ್ತಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಹೊರವಲಯದಲ್ಲಿ ಬೋನಿಗೆ ನಾಯಿಯನ್ನು ಕಟ್ಟಿ ಹಾಕಿ ಇರಿಸಿದ್ದರು. ನಾಯಿಯ ಶಬ್ದಕ್ಕೆ ಚಿರತೆ ಬೋನಿಗೆ ಬಿದ್ದು ಲಾಕ್ ಆಗಿದೆ.
ಕೊನೆಗೂ ಎರಡು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಚಿರತೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

