ನಂಜನಗೂಡು: ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಬೈಕ್ ಗಳ ನಡುವೆ ಡಿಕ್ಕಿಯಾದ ಪರಿಣಾಮ ಆರು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಬದನವಾಳು ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೆಮ್ಮರಗಾಲ ಗ್ರಾಮದ ಮಹದೇವಸ್ವಾಮಿ, ಅರುಣ, ನಂಜುಂಡಸ್ವಾಮಿ ಮತ್ತು ಹೆಡತಲೆ ಗ್ರಾಮದ ದಂಪತಿಗಳು ಹಾಗೂ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗೊಂಡರು. ಮಹದೇವಸ್ವಾಮಿ, ಅರುಣ, ನಂಜುಂಡಸ್ವಾಮಿ ಒಂದೇ ಬೈಕ್ ನಲ್ಲಿ ಹೆಮ್ಮರಗಾಲ ಗ್ರಾಮಕ್ಕೆ ಹೋಗುತ್ತಿದ್ದರು.

ಮತ್ತೊಂದು ಬೈಕ್ನಲ್ಲಿ ದಂಪತಿಗಳು ತನ್ನ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದರು. ಈ ವೇಳೆ ತಿರುವು ಪಡೆದುಕೊಳ್ಳುತ್ತಿದ್ದಾಗ ಖಾಸಗಿ ಶಾಲಾ ಬಸ್ ವೊಂದು ತಿರುವು ಪಡೆದುಕೊಂಡಿದೆ. ಇದರಿಂದ ನಿಯಂತ್ರಣ ತಪ್ಪಿ ಬೈಕ್ ಗಳು ಡಿಕ್ಕಿಯಾಗಿವೆ ಎನ್ನಲಾಗಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ, ಮೂವರು ಸಂಚರಿಸುತ್ತಿದ್ದರು.

ಇದರಿಂದ ಎರಡು ಬೈಕ್ಗಳಲ್ಲಿ ತೆರಳುತ್ತಿದ್ದ ಸವಾರರಿಗೆ ಗಂಭೀರ ಗಾಯಗಳಾಗಿದೆ. ಇಬ್ಬರು ಮಕ್ಕಳು, ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.