ಗುಂಡ್ಲುಪೇಟೆ : ಕೆರೆಗಳಿಗೆ ನೀರು ಹಾಗೂ ಇನ್ನಿತರ ಬೇಡಿಕೆಗಳನ್ನ ಮುಂದಿರಿಸಿ ರೈತರು ನಡೆಸುತ್ತಿರುವ  ಅಹೋರಾತ್ರಿ ಧರಣಿ  ಮೂರನೇ ದಿನಕ್ಕೆ ಕಾಲಿಟ್ಟಿದೆ ಆದರೆ  ಯಾವೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಗಳಾಗಲಿ ಭೇಟಿ ನೀಡದಿರುವುದಕ್ಕೆ ಪ್ರತಿಭಟನಾ ನಿರತರು ಆಕ್ರೋಶಗೊಂಡಿದ್ದಾರೆ.

ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸ್ಪಂದನೆ ನೀಡಿಲ್ಲ, ತಾಲೂಕು ಕಛೇರಿ ಮುಂಭಾಗವೇ ಧರಣಿ ನಡೆಯುತ್ತಿದ್ದರೂ ಸಹ ತಹಸೀಲ್ದಾರ್ ತನ್ಮಯ್ ಅವರು ನಮ್ಮ ಸಮಸ್ಯೆ ಕೇಳಲು ಮುಂದಾಗಿಲ್ಲ , ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಜಡತ್ವಹಿಡಿದಿದೆ ಎಂದು ಕಿಡಿಕಾರಿದ ಶಿವಪುರ ಮಹದೇವಪ್ಪ ಚುನಾಯಿತ ಜನಪ್ರತಿನಿದಿಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನ ಕೂಗಿದರು.

ರೈತರ ಪ್ರಶ್ನೆಗಳಿಗೆ ತಬ್ಬಿಬ್ಬಾಗಿರುವ ಜಿಲ್ಲಾಡಳಿತ ದಿನಕ್ಕೊಂದು ನೆಪಹೇಳಿ ಜವಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ, ಕೂಡಲೇ ಜಿಲ್ಲಾಡಳಿತ , ತಾಲೂಕು ಆಡಳಿತ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪ್ರಭಾಕರನ್ ರೈತರ ಬಳಿ ಬಂದು ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಬೇಕು, ಇಲ್ಲವಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.