ನಂಜನಗೂಡು: ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ರವರ ಫ್ಲೆಕ್ಸ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿದ ಪ್ರಕರಣವನ್ನು ಖಂಡಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದರು.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ನೇತೃತ್ವದಲ್ಲಿ ಜಮಾಯಿಸಿದ ರೈತರು, ಅಂಬೇಡ್ಕರ್ ರವರ ಫ್ಲೆಕ್ಸ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಮಾತನಾಡಿ, ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ ಮತ್ತು ಜ್ಯೋತಿಗೌಡನಪುರ ಗ್ರಾಮಗಳಲ್ಲಿ ಬುದ್ಧ ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಫ್ಲೆಕ್ಸ್ ಗೆ ಅಪಮಾನ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಬದನಗುಪ್ಪೆ ಗ್ರಾಮದಿಂದ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಬೃಹತ್ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಯಾವುದೇ ರಾಷ್ಟ್ರ ನಾಯಕರಿಗೆ ಅಪಮಾನ ಮಾಡಿದರೆ ನಾವು ಬೀದಿಗೆ ಬಂದು ಹೋರಾಟ ಮಾಡುತ್ತೇವೆ.
ನೀಲಿ ಆರ್ಮಿ ಜೊತೆ ಗ್ರೀನ್ ಆರ್ಮಿ ಇರುತ್ತದೆ. ಸರ್ಕಾರಗಳು ಮತ ಪಡೆದುಕೊಳ್ಳುವುದಕ್ಕೋಸ್ಕರ ರಾಷ್ಟ್ರ ನಾಯಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿ, ಆಯ ಸಮುದಾಯದ ರಾಷ್ಟ್ರ ನಾಯಕರನ್ನು ಒಂದೇ ಜಾತಿಗೆ ಸೀಮಿತ ಮಾಡಿ, ಒಂದೇ ಸಮುದಾಯಕ್ಕೆ ಜಯಂತಿಗಳನ್ನು ಆಚರಣೆ ಮಾಡುತ್ತಾರೆ. ಇದರಿಂದ ಸಮುದಾಯಗಳನ್ನು ಎತ್ತಿ ಕಟ್ಟುವ ವ್ಯವಸ್ಥೆ ಸರ್ಕಾರಗಳಿಂದಲೇ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಬುದ್ಧ, ಬಸವಣ್ಣ, ಡಾ.ಬಿ.ಆರ್ ಅಂಬೇಡ್ಕರ್, ಕನಕದಾಸರು ಸೇರಿದಂತೆ ಹಲವು ನಾಯಕರಿಗೆ ನಿರಂತರವಾಗಿ ಅವರ ಮೂರ್ತಿಗಳಿಗೆ ಅಪಮಾನ ಮಾಡುವುದು ನಡೆಯುತ್ತಲೇ ಇದೆ.
ಇದಕ್ಕೆಲ್ಲ ಕಡಿವಾಣ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಕಠಿಣ ಕಾನೂನನ್ನು ಜಾರಿ ಮಾಡಬೇಕು. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಾ ಬಂದಿದ್ದರು ಅವಮಾನ ಮಾಡುವ ಕೆಟ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಜ್ಯೋತಿಗೌಡನಪುರ ಪ್ರಕರಣದಲ್ಲಿ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಪೊಲೀಸ್ ಇಲಾಖೆಯ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವುದರಿಂದ ಪೊಲೀಸರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ರಾಷ್ಟ್ರ ನಾಯಕರಿಗೆ ಅಪಮಾನವಾಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಪೊಲೀಸರನ್ನು ಕಂಡರೆ ಯಾರು ಕೂಡ ಭಯಪಡುತ್ತಿಲ್ಲ. ಇದರಿಂದಲೇ ಕೊಲೆ, ಸುಲಿಗೆ, ಅತ್ಯಾಚಾರ, ಮೂರ್ತಿಗಳಿಗೆ ಅಪಮಾನ ಸೇರಿದಂತೆ ಹಲವು ಪ್ರಕರಣಗಳು ದಿನನಿತ್ಯ ನಡೆಯುತ್ತಿವೆ. ಪೊಲೀಸ್ ಇಲಾಖೆ ರಾಜಕೀಯ ಪ್ರಭಾವದಿಂದ ಮುಕ್ತವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ. ಕೂಡಲೇ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ವೆಂಕಟೇಗೌಡ, ಸಿಂಧುವಳ್ಳಿ ಮಹದೇವನಾಯಕ, ರವಿಕುಮಾರ್, ಸಿದ್ದರಾಜು, ಪ್ರಕಾಶ್, ಕೃಷ್ಣ, ಮಹದೇವಸ್ವಾಮಿ, ಶಿವಣ್ಣ, ರಂಗಸ್ವಾಮಿನಾಯಕ, ಮಂಜು, ನಾಗರಾಜುನಾಯಕ, ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

