ನಂಜನಗೂಡು: ಪಟ್ಟಣದ ಕೊರೆಹುಂಡಿ ಬಳಿ ಕಬಿನಿ ಬಲದಂಡೆ ನಾಲೆಯ ತೋಳುಗಾಲುವೆ ಹಾದು ಹೋಗಿದೆ ಇದಕ್ಕಾಗಿ ಹುಲ್ಲಹಳ್ಳಿ ನಾಲೆಯ ಮೇಲೆ ನಿರ್ಮಿಸಿರುವ ತೋಳುಗಾಲುವೆಯ ಮೇಲ್ಸೇತುವೆ ಕುಸಿದು ಬಿದ್ದಿದ್ದು, ಇದರಿಂದಾಗಿ ರೈತರು ಮತ್ತು ಸುತ್ತ ಮುತ್ತಲ ಗ್ರಾಮಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ತನ ಬಟಾ ಬಯಲಾಗಿದ್ದು, ಪರಿಣಾಮ ಕೋಟ್ಯಾಂತರ ರೂ. ವೆಚ್ಚದ ತೋಳಗಾಲುವೆ ಕುಸಿದು ಬಿದ್ದು, ಜನರ ತೆರಿಗೆ ಹಣ ನೀರಿನಲ್ಲಿ ಹುಣಸೆ ಹಿಂಡಿದಂತಾಗಿದೆ. ಅಚ್ಚುಕಟ್ಟು ನಾಲೆಗಳ ಕಾಮಾಗಾರಿಗಳನ್ನು ಗುಣಮಟ್ಟತೆಯಿಂದ ಮಾಡಿ, ರೈತರ ಹಿತ ಕಾಪಾಡಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ತನಕ್ಕೆ ರೈತರು ಮತ್ತು ಗ್ರಾಮಸ್ಥರುಗಳು ಹಿಡಿಶಾಪ ಹಾಕಿದ್ದಾರೆ.
ನಾಲೆ ಕುಸಿದು ಬಿದ್ದು ಹೊಡೆದು ಹೋಗಿರುವ ಪರಿಣಾಮ, ಸುತ್ತ ಮುತ್ತಲಿನ ಜಮೀನುಗಳ ಕೃಷಿ ಚಟುವಟಿಕೆ ಮತ್ತು ನಾಟಿ ಕಾರ್ಯಕ್ಕೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಮತ್ತು ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ನೀರಾವರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ರೈತರು ಮತ್ತು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಕುಸಿದು ಬಿದ್ದ ನಾಲೆ ಕಾಮಗಾರಿಗೆ ಸಂಬಂಧಿಸಿದಂತೆ ತರಾಟೆಗೆ ಪಡೆದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿಗಳನ್ನು ನಡೆಸುವ ಮೂಲಕ ಹಣ ಮಾಡುತ್ತಿರುವ ದೊಡ್ಡ ದಂಧೆ ನಡೀತ ಇದ್ದು, ಈ ರೀತಿ ಕಳಪೆ ಕಾಮಗಾರಿಗಳಿಂದ ನಾಲೆಗಳು ಕುಸಿತಗೊಳ್ಳುತ್ತಿದೆ. ಅಲ್ಲದೆ ಒಂದೇ ಇಲಾಖೆಯಲ್ಲಿ ಇದೇ ತಾಲ್ಲೂಕಿನಲ್ಲಿ ಹಲವು ಅಧಿಕಾರಿಗಳು, ಒಂದೇ ಸ್ಥಳದಲ್ಲಿ ಹಲವು ವರ್ಷಗಳ ಕಾಲ ಠಿಕಾಣಿ ಹೂಡಿ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ .
ಇದರಿಂದಾಗಿ ನಾಲೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕುಸಿದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದೆ. ಒಟ್ಟಾರೆ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಸರಿಯಾಗಿ ಶಿಸ್ತು ಕ್ರಮ ವಹಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

