ಮೈಸೂರು : ಹುಲಿ ದಾಳಿಯಿಂದ ರೈತನ ಸಾವು ವಿಚಾರವಾಗಿ ಮೈಸೂರಿನ ಶವಾಗಾರಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದರು.
ಈಶ್ವರ್ ಖಂಡ್ರೆಯನ್ನು ರೈತರು ಸುತ್ತುವರಿದರು. ಸರಗೂರಿನಿಂದ ಶವ ಯಾಕೆ ಮೈಸೂರಿಗೆ ಬಂತು ಅಂತ ಕ್ಲಾಸ್ ತೆಗೆದುಕೊಂಡರು. ರೈತನ ಸಾವಿಗೆ ಬೆಲೆ ಇಲ್ವಾ, ಅಧಿಕಾರಿಗಳಿಗೆ ರೈತರು ಛೀಮಾರಿ ಹಾಕಿದರು.
ನನಗೆ ಇಲ್ಲಿಗೆ ರೈತನ ಶವ ತಂದಿರೋದೆ ಗೊತ್ತಿಲ್ಲ, ನನಗಾಗಿ ಶವ ಇಲ್ಲಿಗೆ ತಂದಿದ್ದಾರೆ ಅಕ್ಷಮ್ಯ ಅಪರಾಧ, ನಾನು ಕ್ಷೇಮೇ ಕೇಳುತ್ತೇನೆ, ಅಂತವರ ವಿರುದ್ಧ ಅಗತ್ಯ ಕ್ರಮಕ್ಕೆ ಸೂಚನೆ ನೀಡುತ್ತೇನೆ. ಅರಣ್ಯ ಒತ್ತುವರಿ, ಅಕ್ರಮ ರೆಸಾರ್ಟ್ ಗಳಿಂದನೆ ಸಾವುಗಳು ಆಗ್ತಿವಿ ಅನ್ನೋ ಆರೋಪ ಕೇಳಿಬಂದಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲು ಹೇಳಿದ್ದೇನೆ ಎಂದರು.
ಈ ಕುರಿತು ಸಭೆ ಮಾಡುತ್ತೇನೆ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು, ಇಡೀ ಸರ್ಕಾರವೇ ಸಂತಾಪ ಹಾಗೂ ಶೋಕದಲ್ಲಿದೆ. ಮೃತನ ಕುಟುಂಬದ ಜೊತೆ ನಾವಿರುತ್ತೇವೆ ಎಂದು ಮೈಸೂರಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದರು.
ಈಶ್ವರ್ ಖಂಡ್ರೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಾವಿಗೆ ನೀವುಗಳು ಹೊಣೆ, ಅಕ್ರಮ ರೆಸಾರ್ಟ್ ಗಳು ತಲೆ ಎತ್ತಿವೆ. ಈ ಬಗ್ಗೆ ದಾಖಲೆ ಕೊಟ್ರು ಕ್ರಮ ಆಗ್ತಿಲ್ಲ, ಕಾಡಿನಿಂದ ನಾಡಿಗೆ ಹುಲಿಗಳು ಬರ್ತಿವೆ. ರೈತರು ಬಲಿ ಆಗ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ವಿರುದ್ಧ ರೈತರು ಕಿಡಿಕಾರಿದರು.
ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ತಳ್ಳಾಟ ನಡೆದಿದೆ. ರೈತರನ್ನು ಪೊಲೀಸರು ತಳ್ಳಿದ್ದಾರೆ. ಪೊಲೀಸರ ವಿರುದ್ಧವೂ ರೈತರು ಆಕ್ರೋಶ ವ್ಯಕ್ತಪಡಿಸಿದರು. ಶವಾಗಾರದ ಮುಂದೆ ರೈತರು ಪ್ರತಿಭಟನೆಗೆ ಮುಂದಾದರು.

