ನಂಜನಗೂಡು: ಬಡ ರೈತರಿಗೆ ಸಾಗುವಳಿ ಪತ್ರವನ್ನು ತಾಲೂಕು ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ನಂಜನಗೂಡಿನ ತಾಲ್ಲೂಕು ಕಛೇರಿಗೆ ಮುತ್ತಿಗೆ ಹಾಕಿ ನಿದ್ರಿಸುವ ಮೂಲಕ ಪ್ರತಿಭಟಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ರೈತರು ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಜಮಾಯಿಸಿ, ಸರ್ಕಾರ ಮತ್ತು ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್ ವಿದ್ಯಾಸಾಗರ್ ಮಾತನಾಡಿ, ಆಡಳಿತ ವ್ಯವಸ್ಥೆ ಉಳುಮೆ ಮಾಡುತ್ತಿರುವ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಉಳುವವನೇ ಭೂಮಿಯ ಒಡೆಯ ಎಂದು ಸರ್ಕಾರ ಹೇಳಿತ್ತು. ಆದರೆ, ಉಳ್ಳವರು ಭೂಮಿಯ ಒಡೆಯನಾಗಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವವರಿಗೆ ಸರ್ಕಾರ ಸಾಗುವಳಿ ಪತ್ರವನ್ನು ನೀಡಬೇಕು. ಅರ್ಹ ರೈತರಿಗೆ ಬಗರ್ ಹುಕುಂ ಸಾಗುವಳಿ ಪತ್ರವನ್ನು ನೀಡುತ್ತಿಲ್ಲ.

ತಾಲ್ಲೂಕಿನ ಸೂರಹಳ್ಳಿ ಗ್ರಾಮದ ಸರ್ವೆ ನಂ. 269 ರಲ್ಲಿ 316 ಎಕರೆ ಪ್ರದೇಶದಲ್ಲಿ ನೂರಾರು ರೈತರು ಸುಮಾರು 200 ವರ್ಷಗಳಿಂದಲೂ ಜಮೀನು ಮಾಡಿಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ, ಬಗರ್ ಹುಕುಂ ಸಾಗುವಳಿ ಪತ್ರ ಮಾತ್ರ ನೀಡಿಲ್ಲ.

ಸಾಗುವಳಿ ಮಾಡಲು ಲಂಚ ನೀಡದೆ ಇರುವುದಕ್ಕೆ ಅಧಿಕಾರಿಗಳು ಇದನ್ನು ಸರ್ಕಾರಿ ಗೋಮಾಳ ಎಂದು ಆರ್ ಟಿ ಸಿ ಯಲ್ಲಿ ನಮೂದಿಸುತ್ತಾರೆ. ಹಣ ಇದ್ದವರಿಗೆ ಸಾಗುವಳಿ ಪತ್ರವನ್ನು ನೀಡುತ್ತಾರೆ ಎಂದು ಆರೋಪಿಸಿದರು. ತಾಲ್ಲೂಕು ಆಡಳಿತ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.

ಸಿಎಂ ರವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಹಶೀಲ್ದಾರ್ ರವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಾಮಾನ್ಯ ಜನರಿಗೆ ತಹಶೀಲ್ದಾರ್ ಸಿಗುತ್ತಿಲ್ಲ. ಸಂಜೆ ಮೇಲೆ ಕಛೇರಿಗೆ ಬರುತ್ತಿದ್ದಾರೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ತಹಶೀಲ್ದಾರ್ ರವರನ್ನು ತಾಲ್ಲೂಕಿನಿಂದ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.

ಇನ್ನೂ ಸರ್ಕಾರಿ ಕರಾಬ್ ಇರೋದು, ಸರ್ಕಾರಿ ಗೋಮಾಳ ಆಗುತ್ತದೆ. ಬಡವರಿಗೆ ಸಾಗುವಳಿ ಪತ್ರ ಸಿಗುತ್ತಿಲ್ಲ. ನಂಜನಗೂಡಿನಲ್ಲಿರುವ ಕಂದಾಯ ಅಧಿಕಾರಿಗಳನ್ನು ಈ ಕೂಡಲೇ ತಾಲ್ಲೂಕಿನಿಂದ ಗೇಟ್ ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ, ಮಹದೇವನಾಯಕ, ಮೋಹನ್, ರಮೇಶ್ ನಾಯಕ, ಶಿವಣ್ಮ, ಮಾದೇಗೌಡ, ಮಲ್ಲೇಶ್, ಮಹದೇವಸ್ವಾಮಿ, ಸಿದ್ದರಾಜು, ರಾಜಣ್ಣ, ಶಂಕರನಾಯಕ ಸೇರಿದಂತೆ ರೈತರು ಹಾಜರಿದ್ದರು.

ನಿದ್ರಿಸುತ್ತಿರುವ ತಾಲ್ಲೂಕು ಆಡಳಿತದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಕರೆ
ನಂಜನಗೂಡು ತಾಲ್ಲೂಕಿನಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಯಾವುದೇ ಕೆಲಸಗಳು ನಡೆಯುತ್ತಿಲ್ಲ.

ಸಿ.ಎಂ ಕ್ಷೇತ್ರವಾದರೂ ಯಾವುದೇ ಪ್ರಯೋಜನವಾಗಿಲ್ಲ. ತುಕ್ಕು ಹಿಡಿಯುತ್ತಿರುವ ತಾಲ್ಲೂಕು ಆಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ. ನಿದ್ರಿಸುತ್ತಿರುವ ತಾಲ್ಲೂಕು ಆಡಳಿತವನ್ನು ನಾವು ಎಚ್ಚರಿಸಬೇಕಾಗಿದೆ. ವರ್ಗಾವಣೆಯಾಗದೆ ತಾಲ್ಲೂಕಿನಲ್ಲಿಯೇ ಜಾಂಡಯೂರಿರುವ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡುವ ತನಕ ಹೋರಾಟ ಮುಂದುವರಿಸುತ್ತೇವೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಎಚ್ಚರಿಕೆ ನೀಡಿದ್ದಾರೆ.