ನಂಜನಗೂಡು: ಸೂರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಸುಮಾರು 170ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆರೆಯ ಮಗ್ಗುಲಲ್ಲಿ ಶಾಲೆ ನಿರ್ಮಾಣವಾಗಿದ್ದು, ಎರಡು ಶಾಲಾ ಕೊಠಡಿಗಳು ಶಿಥಿವಗೊಂಡಿವೆ. ಇದರಿಂದ ಮಕ್ಕಳಿಗೆ ಹಾಲಿನ ಡೈರಿಯ ಕೊಠಡಿಯಲ್ಲಿ ಪಾಠ ಪ್ರವಚನ ಮಾಡಲಾಗುತ್ತಿದೆ. ಮೂರು ವಿವಿಧ ಕಟ್ಟಡದಲ್ಲಿ ವ್ಯಾಸಂಗ ಮಾಡತ್ತಿದ್ದಾರೆ.
ಒಂದೇ ಸ್ಥಳದಲ್ಲಿ ಶಾಲೆ ಕಟ್ಟಡವನ್ನು ನಿರ್ಮಿಸಿ ಕೊಡಿ ಎಂದು ನವಿಲೂರು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಶಾಲೆಗೆ ಸರಿಯಾದ ಕಟ್ಟಡ ವ್ಯವಸ್ಥೆ ಇಲ್ಲದೆ ನಮ್ಮ ಮಕ್ಕಳು ಹಾಲಿನ ಡೈರಿಯ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆ ಪಕ್ಕದಲ್ಲಿ ಕೆರೆ ಇರುವುದರಿಂದ ಸೊಳ್ಳೆ ಕಾಟದಿಂದ ನಮ್ಮ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈಗಾಗಲೇ ಕೆರೆಯ ನೀರಿನ ವಸ್ತಿಯಿಂದ ಎರಡು ಕೊಠಡಿಗಳು ಶಿಥಿಲವಾಗಿ ಉಪಯೋಗಕ್ಕೆ ಬರುತ್ತಿಲ್ಲ ಕೂಡಲೇ ಶಾಲೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಮಹಿಳಾ ಅಧ್ಯಕ್ಷ ಶ್ವೇತಾ, ಎಸ್. ಡಿ. ಎಂ. ಸಿ. ಅಧ್ಯಕ್ಷ ರಮೇಶ್, ಹೋಬಳಿ ಅಧ್ಯಕ್ಷ ಮಹದೇವ ನಾಯಕ, ಗ್ರಾಮಸ್ಥರಾದ ಗೌಡಕೆ ನಾಗಪ್ಪ, ಪುಟ್ಟಪ್ಪ, ಜವರಯ್ಯ ,ಕೃಷ್ಣಯ್ಯ, ಸಿದ್ದನಾಯಕ್, ಮಹಾದೇವ ನಾಯಕ, ಮಲ್ಲೇಶ ಶೆಟ್ಟಿ, ಸಿದ್ದರಾಜು, ಗ್ರಾಮಸ್ಥರು ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.

