ಮೈಸೂರು: ಕೇರಳಿಗರು, ಬೆಂಗಳೂರಿಗರಿಂದ ರಾಜ್ಯದ ಗಡಿಭಾಗದ ಜನರು, ರೈತರಿಗೆ ಸಂಕಷ್ಟ ಎದುರಾಗಿದ್ದು, ಮದ್ಯ ಸೇವಿಸಿ ಜಮೀನಿನಲ್ಲಿ ಖಾಲಿ ಬಾಟಲಿ ಹೊಡೆದು ಹಾಕಿ ಪುಂಡಾಟ ನಡೆಸಿದ್ದಾರೆ.
ಹೊಸ ವರ್ಷಾಚರಣೆ, ವರ್ಷಾಂತ್ಯದ ಮೋಜು- ಮಸ್ತಿಗೆ ಗಡಿಭಾಗದ ಜನ ಕಂಗಾಲಾಗಿದ್ದು, ನಾಗರಹೊಳೆ ಅಭಯಾರಣ್ಯದ ಒಳಗೂ ಅಕ್ರಮ ಪ್ರವೇಶ ಮಾಡಿದ್ದಾರೆ. ರಾಷ್ಟ್ರೀಯ ಹುಲಿ ಯೋಜನೆಯ ಸೂಕ್ಷ್ಮ ಪ್ರದೇಶದಲ್ಲಿ ರಾಶಿಗಟ್ಟಲೆ ಮದ್ಯದ ಖಾಲಿ ಬಾಟಲಿಗಳಿವೆ.

ಕೇರಳ ಹಾಗು ಸಿಲಿಕಾನ್ ಸಿಟಿ ಮಂದಿಗಳು ಈಯರ್ ಎಂಡ್ ಸಂಭ್ರಮದಲ್ಲಿದ್ದಾರೆ. ಪ್ರಕೃತಿ ಸೌಂದರ್ಯ ಸವಿಯುವ ನೆಪದಲ್ಲಿ ಪ್ರಕೃತಿ ಮಾತೆ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲೆ ಎಚ್.ಡಿ ಕೋಟೆ ಭಾಗಕ್ಕೆ ಲಗ್ಗೆ ಇಟ್ಟಿದ್ದು, ತಾರಕ ಜಲಾಶಯ ಹಿನ್ನೀರಿನಲ್ಲಿ ಯುವ ಸಮೂಹದ ಡಿಂಗ್ ಡಾಂಗ್ ನಡೆಯುತ್ತಿದೆ.

ಎಣ್ಣೆ ಹೊಡೆದು ಯುವತಿಯರ ಜೊತೆ ಮಸ್ತ್ ಮಜಾ ಮಾಡುತ್ತಿದ್ದು, ಕೇರಳದಲ್ಲಿ ಮದ್ಯ ಸಿಗದ ಕಾರಣ ಮೈಸೂರು ಗಡಿ ಭಾಗಕ್ಕೆ ಆಗಮಿಸಿದ್ದಾರೆ. ಕಂಠಪೂರ್ತಿ ಕುಡಿದು ಮೈಮೇಲೆ ಪ್ರಜ್ಞೆ ಇಲ್ಲದೆ ಯುವ ಸಮೂಹ ಓಡಾಡುತ್ತಿದೆ. ಕುಡಿದ ಖಾಲಿ ಮದ್ಯದ ಬಾಟಲಿಗಳನ್ನ ಜಮೀನಿನಲ್ಲಿ ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಬಾಟಲಿ ಚೂರುಗಳಿಂದ ಕಾಡಿನಲ್ಲಿರುವ ಹುಲಿ, ಆನೆ, ಚಿರತೆ, ಜಿಂಕೆಗಳಿಗೂ ಅಪಾಯ ಎದುರಾಗಿದೆ.
ರಾಜಾರೋಷವಾಗಿ ಎಣ್ಣೆ ಹೊಡೆದು ತೂರಾಡಿದರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಅರಣ್ಯ ಇಲಾಖೆ, ಅಬಕಾರಿ, ಜಲಮಂಡಳಿ, ಪೊಲೀಸ್ ಇಲಾಖೆಗಳು ಮೌನವಾಗಿದ್ದು, ಹೆಚ್.ಡಿ.ಕೋಟೆ ಭಾಗದಲ್ಲಿ ಅಕ್ರಮ, ಅನೈತಿಕತೆ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

