ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ದಡದಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ ಜಮೀನಿನಲ್ಲಿ ಕಳೆದ 4 ದಿನಗಳಿಂದ ತಂಗಿದ್ದ ಆನೆ ಮರಿಯೊಂದು ಬೆಳೆಯನ್ನು ತಿಂದು ತುಳಿದು ಸುಮಾರು 3 ಲಕ್ಷ ರೂ. ನಷ್ಟ ಉಂಟು ಮಾಡಿದೆ.
ದಡದಹಳ್ಳಿ ಗ್ರಾಮದ ಒಂಟಿ ವಿಧವಾ ಮಹಿಳೆ ಸಣ್ಣಮ್ಮ, ಲೇ. ಚೆನ್ನಯ್ಯ ಎಂಬುವವರು ಬೇದ್ದಲಾಪುರ ಸರ್ವೆ ನಂಬರ್ 11/27 A ಯಲ್ಲಿ 3 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದರು. ಕಟಾವಿಗೆ ಬಂದಿದ್ದ ಬೆಳೆಯೊಳಗೆ ಆನೆ ಮರಿಯೊಂದು 4 ದಿನಗಳಿಂದ ತಂಗಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ 3 ಸಾಕಾನೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿ ಮರಿಯಾನೆಯನ್ನು ಸೆರೆ ಹಿಡಿದರು. ಆದರೆ ಈ ಕಾರ್ಯಾಚರಣೆ ವೇಳೆಯೇ ರೈತ ಮಹಿಳೆಯ ಜಮೀನಿನಲ್ಲಿದ್ದ ಮುಸುಕಿನ ಜೋಳದ ಬೆಳೆಯನ್ನು ಆನೆ ತುಳಿದು ನಾಶಗೊಳಿಸಿದೆ.
ಇದರಿಂದ ರೈತ ಮಹಿಳೆಗೆ ಸುಮಾರು 3 ಲಕ್ಷ ರೂ. ಅಪಾರ ನಷ್ಟವಾಗಿದೆ. ಕೂಡಲೇ ಸ್ಥಳದಲ್ಲೇ ಪರಿಹಾರ ನೀಡಬೇಕೆಂದು ಶಿವಲಿಂಗಯ್ಯ ಯಶವಂತಪುರ, ಮರಿಸ್ವಾಮಿ, ಗಣೇಶ್ ಅವರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

