ಮೈಸೂರು: ಬಾನಂಗಳದಲ್ಲಿ ವಿದ್ಯಾರ್ಥಿಗಳ ನೂರಾರು ಬಣ್ಣ- ಬಣ್ಣದ ಗಾಳಿಪಟಗಳ ಚಿತ್ತಾರ ನೋಡುಗರ ಹಾಗೂ ಭಾಗವಹಿಸಿದ್ದ ವಿದ್ಯಾರ್ಥಿಗಳ ಮನಸೂರೆಗೊಂಡಿತು. ಮೈಸೂರು ನಗರದ ಜೀನಿಯಸ್ ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಳಿಪಟ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.

ಮೈಸೂರಿನ ಪ್ರತಿಷ್ಠಿತ ಜೀನಿಯಸ್ ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಗಾಳಿಪಟ ಸ್ಪರ್ಧೆಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಪ್ರಭು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸುರೇಖಾ ಗಾಳಿಪಟವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಸುರೇಖಾ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಗಾಳಿಪಟ ಸ್ಪರ್ಧೆ ಆಯೋಜಿಸಿಲಾಗಿದೆ. ಈ ವರ್ಷದಿಂದ ಅಳಿಗುಳಿ ಮಣೆ, ರಂಗೋಲಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಿನ್ನು ಆಯೋಜಿಸಲು ಮುಂದಾಗುತ್ತೇವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಗಾಳಿಪಟ ಹಾರಿಸುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ಆಟದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ.

ರಜಾ ದಿನಗಳಲ್ಲಿ ಶಾಪಿಂಗ್ ಮಾಲ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಮಯ ಕಳೆಯುವ ಬದಲು, ಮಕ್ಕಳೊಂದಿಗೆ ಎಲ್ಲ ವಯೋಮಾನದವರು ಸೇರಿ ಗಾಳಿಪಟ ಹಾರಿಸುವ ಮೂಲಕ ಸಂತಸ ಪಡಬಹುದು ಎಂದು ಹೇಳಿದರು.

ಸ್ಪರ್ಧೆಯಲ್ಲಿ ಸುಮಾರು 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ, ಸಾಲುಪಟ, ರಣಹದ್ದು, ಮೀನಿನ ಮಾದರಿ ಸೇರಿದಂತೆ ವಿವಿಧ ಆಕೃತಿಗಳನ್ನು ಹೋಲುವ ಚಿತ್ತಾಕರ್ಷಕ ಗಾಳಿಪಟಗಳು ಬಾನಂಗಳಲ್ಲಿ ಹಾರಾಡಿ ನೋಡುಗರ ಗಮನ ಸೆಳೆದವು. ಸುತ್ತಮುತ್ತಲ ನಾಗರಿಕರು ಹಾಗೂ ಮಕ್ಕಳು ಸಂತಸ ವ್ಯಕ್ತಪಡಿಸಿದರು.

ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಪ್ರಭು, ಆಡಳಿತ ಮಂಡಳಿಯ ಸದಸ್ಯರಾದ ನಿಶಾಂತ್, ಉಪನ್ಯಾಸಕರಾದ ರಶ್ಮಿ, ಶೋಭಾ, ಯಶಸ್ವಿನಿ, ಪವಿತ್ರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.