ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆಯಲ್ಲಿ ನಡೆಯುವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳ ಕಾರಣದಿಂದ ಆಯ್ದ ನಿರ್ದಿಷ್ಟ ದಿನಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ರತ್ನ ಸಿಂಹಾಸನ ಜೋಡಣೆ ಕಾರ್ಯದ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಖಾಸಗಿ ದರ್ಬಾರ್ ಪೂಜೆಯ ಪ್ರಯುಕ್ತ ಅಕ್ಟೋಬರ್ 11ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಪ್ರವಾಸಿಗರಿಗೆ ಪ್ರವೇಶಾವಕಾಶ ಇರುವುದಿಲ್ಲ.
ಅಲ್ಲದೆ, ಅಕ್ಟೋಬರ್ 20ರ ಆಯುಧ ಪೂಜೆ ಹಾಗೂ ಅಕ್ಟೋಬರ್ 21ರ ವಿಜಯದಶಮಿಯಂದು ಇಡೀ ದಿನ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ವಿಜಯದಶಮಿಯ ದಿನ ಕೇವಲ ದಸರಾ ಪಾಸ್ ಮತ್ತು ಜಂಬೂಸವಾರಿ ಟಿಕೆಟ್ ಹೊಂದಿರುವವರಿಗೆ ಮಾತ್ರ ಅರಮನೆ ಆವರಣ ಪ್ರವೇಶಿಸಲು ಅನುಮತಿಸಲಾಗುತ್ತದೆ. ಕೊನೆಯದಾಗಿ, ರತ್ನ ಸಿಂಹಾಸನ ವಿಸರ್ಜನೆ ಹಾಗೂ ಸ್ಥಳಾಂತರ ಪ್ರಕ್ರಿಯೆ ನಡೆಯಲಿರುವ ನವೆಂಬರ್ 19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

