ನಂಜನಗೂಡು: ಏಪ್ರಿಲ್ 1 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ದಿನವಾಗಿದ್ದು, ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಆರ್‌ಬಿಐ ಸ್ಥಾಪನೆಗೆ ನೀಡಿರುವ ಕೊಡುಗೆಗಳ ಸ್ಮರಣಾರ್ಥವಾಗಿ ಅರ್ಥಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಭಾಗಿತ್ವದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಎಂಬ ವಿಷಯದ ಬಗ್ಗೆ ನಂಜನಗೂಡು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ವಿ. ಷಣ್ಮುಗಂ ಮಾತನಾಡಿ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನ ಶಿಲ್ಪಿ ಎಂಬ ಗುರುತಿನ ಹೊರತಾಗಿಯೂ, ಅವರು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದರು.

1926 ರಲ್ಲಿ ಬ್ರಿಟಿಷ್ ಸರ್ಕಾರವು ಭಾರತದ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ಹಿಲ್ಟನ್ ಯಂಗ್ ಆಯೋಗವನ್ನು (Hilton Young Commission) ನೇಮಿಸಿತ್ತು. ಈ ಆಯೋಗದ ಮುಂದೆ ಅಂಬೇಡ್ಕರ್ ಅವರು ನೀಡಿದ ಮಾರ್ಗಸೂಚಿಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಆರ್‌ಬಿಐ ಸ್ಥಾಪನೆಯ ಪರಿಕಲ್ಪನೆ ಸಿದ್ಧವಾಯಿತು.

ಅಂಬೇಡ್ಕರ್ ಅವರು ಬರೆದ “ದಿ ಪ್ರಾಬ್ಲಮ್ ಆಫ್ ದಿ ರೂಪಿ, ಇಟ್ಸ್ ಒರಿಜಿನ್ ಅಂಡ್ ಇಟ್ಸ್ ಸೊಲ್ಯೂಷನ್” (The Problem of the Rupee: Its Origin and Its Solution) ಎಂಬ ಸಂಶೋಧನಾ ಪ್ರಬಂಧವು ಆರ್‌ಬಿಐ ರಚನೆಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು.

ದೇಶದ ಹಣದುಬ್ಬರ ನಿಯಂತ್ರಣ ಮತ್ತು ಕರೆನ್ಸಿ ನಿರ್ವಹಣೆಗಾಗಿ ಕೇಂದ್ರೀಯ ಬ್ಯಾಂಕ್‌ನ ಅವಶ್ಯಕತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರು ನೀಡಿದ ವೈಜ್ಞಾನಿಕ ತತ್ವಗಳ ಆಧಾರದ ಮೇಲೆ ಏಪ್ರಿಲ್ 1, 1935 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಕಾರ್ಯ ಆರಂಭ ಮಾಡಿತು. ಇವುಗಳ ಜೊತೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಹಣಕಾಸು ನೀತಿ, ರಾಜ್ಯಕೋಶ ನೀತಿ, ಕೃಷಿ ರಾಷ್ಟ್ರೀಕರಣ, ಭಾರತದಲ್ಲಿ ಸಣ್ಣ ಭೂ ಹಿಡುವಳಿಗಳ ಒಗ್ಗೂಡಿಸುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಪರಿಹಾರಗಳ ಕುರಿತು ಉಪನ್ಯಾಸ ನೀಡಿದರು.

ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಬದುಕಿರುವಾಗಲೇ ಅರ್ಥಶಾಸ್ತ್ರಕ್ಕೆ ನೊಬೆಲ್ ಬಹುಮಾನವನ್ನು ನೀಡುವಂತಿದ್ದರೆ ಎರಡು ಮೂರು ನೊಬೆಲ್ ಗಳು ಅವರಿಗೆ ಬರುತ್ತಿದ್ದವು ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಕೆ ಕೆಂಪೇಗೌಡ ಮಾತನಾಡಿ, ಡಾ.ಬಿ.ಆರ್ ಅಂಬೇಡ್ಕರ್ ರವರು ಕೇವಲ ಸಂವಿಧಾನ ಬರೆಯುವುದರ ಜೊತೆಗೆ ಅವರೊಬ್ಬ ಉತ್ತಮ ಆರ್ಥಿಕ ಚಿಂತಕರಾಗಿದ್ದರು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು ಮತ್ತು ಅವರ ಕೊಡುಗೆಗಳನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಓ.ಜಿ‌ ಬಸವಣ್ಣಗೌಡ, ಡಾ. ಆರ್. ಶ್ರೀನೇ ನಾಯಕ್, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರಾದ ಡಾ. ಡಿ.ಎಸ್. ಜಗದೀಶ್ ಡಿ.ಎಸ್, ಉಪನ್ಯಾಸಕರಾದ ಡಾ.ಬಿಎಸ್ ಸುಮಿತ್ರ, ವಸಂತ್ ಕುಮಾರ್ ಸೇರಿದಂತೆ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.