ನಂಜನಗೂಡು: ಬದನವಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯನ್ನು ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕ ಡಾ.ಎಂ ಕುಮಾರಸ್ವಾಮಿ ಅನಾವರಣಗಳಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಬುದ್ಧ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂಸದ ಸುನೀಲ್ ಬೋಸ್ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರನ್ನು ಯಾರೂ ಮರೆಯಬಾರದು. ನಾವು ಪ್ರತಿದಿನ ಅವರನ್ನು ನೆನೆಯಬೇಕು. ಸಂವಿಧಾನ ದಿಂದಲೇ ಇಂದು ನಾವು ಶಾಸಕರು, ಸಂಸದರು ಆಗಿದ್ದೇವೆ. ಇದಕ್ಕೆ ಮುಖ್ಯ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ರವರು, ಮಹಿಳೆಯರಿಗೆ ಸಮಾನತೆ, ಮೀಸಲಾತಿ ನೀಡಿದ್ದಾರೆ. ಕೆಲವು ಗ್ರಾಮಗಳಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ಆಚರಣೆ ಇದೆ. ದೇವಾಲಯಕ್ಕೆ ಪ್ರವೇಶ ನೀಡುತ್ತಿಲ್ಲ. ಸಂವಿಧಾನದಲ್ಲಿ ಸಮಾನವಾದ ಅವಕಾಶಗಳು ಲಭಿಸಿವೆ. ಪಕ್ಷ ಬೇಧ, ಜಾತಿ, ಮತ ಮರೆತು ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಇಂದು ಗ್ರಾಮದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಸಂತೋಷ ತಂದಿದೆ. ಬದನವಾಳು ಗ್ರಾಮಕ್ಕೆ ಅದರದ್ದೇ ಆದ ಇತಿಹಾಸವಿದೆ. 2022 ರಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ರವರು ಗ್ರಾಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಣೆ ಮಾಡಿ ಹೋಗಿದ್ದಾರೆ.

ಬದನವಾಳು ಗ್ರಾಮಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಒಂದು ಇತಿಹಾಸವಿದೆ. ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣ ಮಾಡುವ ಬಗ್ಗೆ ಹಲವಾರು ವರ್ಷಗಳಿಂದ ಬೇಡಿಕೆ ಇತ್ತು. ಇಂದು ನನಸಾಗಿದೆ. ಅತಿ ಕಿರಿಯ ವಯಸ್ಸಿನಲ್ಲಿ ನಾನು ಶಾಸಕನಾಗಲು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ಇಡೀ ನಂಜನಗೂಡು ತಾಲ್ಲೂಕಿನಲ್ಲಿ ಪಟ್ಟಣದಲ್ಲಿ ಬಿಟ್ಟರೆ ಎರಡನೆಯ ಅತಿ ದೊಡ್ಡ ಪುತ್ಥಳಿ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಬಾಬಾ ಸಾಹೇಬರ ಹೋರಾಟ, ಶಿಕ್ಷಣ, ಕಷ್ಟ ನೋವು, ಅರಿತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯನ್ನಾಗಿ ಮಾಡಿ. ಇದೇ ಸಂದರ್ಭದಲ್ಲಿ ಧೀಮಂತ ನಾಯಕ ಶ್ರೀನಿವಾಸ್ ಪ್ರಸಾದ್ ರವರನ್ನು ಸ್ಮರಣೆ ಮಾಡಬೇಕು. ಅನೇಕ ನಾಯಕರಿಗೆ ಉನ್ನತ ಸ್ಥಾನವನ್ನು ಬದನವಾಳು ಗ್ರಾಮ ಕೊಟ್ಟಿದೆ. ಇದೇ ರೀತಿ ಬಾಬಾ ಸಾಹೇಬ ರವರ ಆದರ್ಶವನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಬುದ್ಧ ವಿಹಾರದ ಸುಗತಪಾಲ ಬತೇಂಜಿ ಧಮ್ಮ ಸಾನ್ನಿಧ್ಯ ವಹಿಸಿದ್ದರು, ಮೈವಿವಿಯ ಪ್ರಾಧ್ಯಾಪಕ ಡಾ.ಎಂ.ಕುಮಾರಸ್ವಾಮಿ, ಶಾಸಕರಾದ ದರ್ಶನ್ ಧ್ರುವ ನಾರಾಯಣ್, ಎಆರ್ ಕೃಷ್ಣಮೂರ್ತಿ , ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಮುಖ್ಯ ಭಾಷಣಕಾರ ಡಾ. ಶಿವಕುಮಾರ್, ವಾಣಿ ಕೆ.ಶಿವರಾಂ, ಆರೋಗ್ಯ ಇಲಾಖೆಯ ನಿವೃತ್ತ ನಿರ್ದೇಶಕಿ ಡಾ. ಪುಷ್ಪಲತಾ ಅಪ್ಪಾಜಿ,
ಗ್ರಾ.ಪಂ ಅಧ್ಯಕ್ಷ ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ಬಿ.ಎಸ್ ರಾಮು, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ದಲಿತ ಮುಖಂಡ ವಿ.ರಾಮಸ್ವಾಮಿ, ನೀಲಮ್ಮ, ಯಜಮಾನರಾದ ಸೋಮು, ವೆಂಕಟೇಶ್, ಮಂಟೇಲಿಂಗು, ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ಗ್ರಾಪಂ ಸದಸ್ಯರಾದ ಗುರು ಸಿದ್ದಮ್ಮ, ಅವಿನಾಶ್, ಸರೋಜಮ್ಮ ಶಿವರಾಜ್, ಮಹದೇವು ಸೇರಿದಂತೆ ಹಲವರು ಭಾಗವಹಿಸಿದ್ದರು.

