ಮೈಸೂರು: ಮಧು ಮೇಹ ಖಾಯಿಲೆ ಬಗ್ಗೆ ಜನರು ಸ್ವಯಂ ವೈದ್ಯ ಮಾಡಿಕೊಳ್ಳುವುದನ್ನು ಬಿಡಬೇಕು ಎಂದು ಜೆಎಸ್‌ಎಸ್ ಆಸ್ಪತ್ರೆಯ ಅಧೀಕ್ಷಕ ಡಾ.ಎಸ್.ಪಿ.ಮಧು ಸಲಹೆ ನೀಡಿದರು.

ನಗರದ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ಉನ್ನತ್ತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿಯ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಕೆಆರ್‌ಎಸ್‌ಎಸ್‌ಡಿಐ ವತಿಯಿಂದ ಅಯೋಜಿಸಿದ್ದ 20ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಜನರು ಡಯಾಬಿಟಿಸ್ ಖಾಯಿಲೆಗೆ ತಾವೇ ಚಿಕಿತ್ಸೆ ಮಾಡಿಕೊಳ್ಳುವುದಕ್ಕೆ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳನ್ನು ನಂಬಿ ಅಲ್ಲಿ ತೋರಿಸುವ ಔಷಧಿಗಳನ್ನು ಬಳಸುತ್ತಾರೆ. ಇದು ಬಹಳ ಅಪಾಯಕಾರಿಯಾದ ಹಾದಿ. ಆದ್ದರಿಂದ ಡಯಾಬಿಟಿಸ್ ಖಾಯಿಲೆ ಉಳ್ಳವರು ನಿಯಮಿತವಾಗಿ ವೈದ್ಯರ ಸಲಹೆ ಪಡೆದು ಔಷಧಿಗಳನ್ನು ಸೇವಿಸುವುದು ಸೂಕ್ತ ಎಂದರು.

ಕೆಲವರು ತಮಗೆ ಸಕ್ಕರೆ ಖಾಯಿಲೆ ಬಂದಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಮುನ್ನೂರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಅಂಶ ಕಂಡು ಬಂದಿದ್ದರು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಮೊದಲು ಈ ಧೋರಣೆ ಹೋಗಬೇಕು. ನಿರ್ಲಕ್ಷ್ಯ ಮಾಡದೇ ವೈದ್ಯರ ಸಲಹೆ ಪಡೆದುಕೊಂಡು ನಿಯಂತ್ರಣ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.

ಅಂಕಿ ಅಂಶಗಳ ಪ್ರಕಾರ ಭಾರತ ಡಯಾಬಿಟಿಕ್ ಎರಡನೇ ಸ್ಥಾನ ಹೊಂದಿದೆ. ಹದಿನೆಂಟು ವರ್ಷ ಮೇಲ್ಪಟ್ಟವರಲ್ಲಿ ಸುಮಾರು ನಲವತ್ತೈದು ಮಿಲಿಯನ್ ಜನರಿಗೆ ಈ ಖಾಯಿಲೆ ಲಕ್ಷಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಡಯಾಬಿಟಿಸ್ ರೋಗವನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಬೇಕು. ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಜೀವನಶೈಲಿಯಲ್ಲಿ ವ್ಯಾಯಾಮ, ನಡಿಗೆ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಸವಣ್ಣ, ಉಪ ಪ್ರಾಂಶುಪಾಲ ಮಾಂತಪ್ಪ, ಆಡಳಿತಾಧಿಕಾರಿ ಶರಷಚಂದ್ರ, ಡಾ.ಒ.ಎಸ್.ರವಿಕುಮಾರ್, ಡಾ.ಬಸವರಾಜು ಎಂ.ಪಾಟೀಲ್, ಡಾ.ಕೆ.ಎಂ.ಶ್ರೀಕಾಂತ್, ಡಾ.ಕೆ.ವಿಜಯ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.